ಗ್ರಾ.ಪಂ ಮಟ್ಟದಲ್ಲಿ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಣೆ:-ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಬೆಳಗಾವಿ,ಡಿಸೆಂಬರ್,9,2024 (www.justkannada.in): ಇಂದು ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ಸದಸ್ಯರು  ರಾಜ್ಯದಲ್ಲಿನ ಬಿಪಿಎಲ್ ಪಡಿತರ ಕಾರ್ಡ್  ರದ್ದು ಕುರಿತು  ಕೇಳಿದ ಪ್ರಶ್ನೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ಅವರು ಉತ್ತರಿಸಿದರು.

ಪಡಿತರ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡಲು ನಾವು ಮುಂದಾದಾಗ ಕೇಂದ್ರ ಸರ್ಕಾರದ ಮಾನದಂಡಗಳ ಅಡಿಯಲ್ಲಿಯೇ ನಾವು ಪರಿಷ್ಕರಣೆ ಮಾಡಲು ಹೋಗಿದ್ದು ಕೆಲವು ಗೊಂದಲಗಳಿಂದ ನಾವು ಅದನ್ನು ತಡೆಹಿಡಿದಿದ್ದೀವಿ. ಅರ್ಹರ ಬಿಪಿಎಲ್ ಪಡಿತರ ಕಾರ್ಡ್ ದಾರರ ಯಾವುದೇ ಕಾರ್ಡ್ ಗಳು ರದ್ದಾಗದಂತೆ ಅಧಿಕಾರಿಗಳಿಗೆ ಸೂಚಿಸಿ  ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಪುನರ್ ಸ್ಥಾಪಿಸಲಾಯಿತು.

ಆದರೂ ಪ್ರಸ್ತುತ ಬಿಪಿಎಲ್ ಪಡಿತರ ಕಾರ್ಡ್ ಗಳಲ್ಲಿ ಅನರ್ಹ ಫಲಾನುಭವಿಗಳ ಪತ್ತೆಹಚ್ಚಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಮ್ಮ ಅಧಿಕಾರಿಗಳು ಪರಿಪಕ್ವವಾದ ಅಂಕಿ ಅಂಶಗಳನ್ನು ಗುರುತಿಸಿ ನಂತರ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್ ಗಳಲ್ಲಿ ಶೇಕಡಾ 20 ರಷ್ಟು ಕಾರ್ಡ್ ಗಳು ಎಪಿಎಲ್ ನವರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು ಇದನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ ಸುಮಾರು ಶೇಕಡ 65%. ರಿಂದ 75% ರಷ್ಟು ಜನಸಂಖ್ಯೆಗೆ  ಬಡತನ ರೇಖೆಗಿಂತ ಕೆಳಗಿರುವಂತೆ ಕಾರ್ಡ್ ಗಳನ್ನು ನೀಡಲಾಗಿದ್ದು ಅದನ್ನು ಪರಿಷ್ಕರಿಸಲಾಗುತ್ತಿದ್ದು  ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಜವಾದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಿ  ನೀಡಲಾಗುವುದು ಎಂದು ಸದನದಲ್ಲಿ ಉತ್ತರಿಸಿದರು.

Key words: BPL, ration cards, distribute, Minister, KH. Muniyappa.