ಹನಿಟ್ರ್ಯಾಪ್ ಚರ್ಚೆ: 48 ಜನರ ಪೆನ್ ಡ್ರೈವ್ ಮಾಡಿಕೊಂಡಿದ್ದಾರೆ ಎಂದ ಸಚಿವ ರಾಜಣ್ಣ: ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರ ಆದೇಶ

ಬೆಂಗಳೂರು,ಮಾರ್ಚ್,20,2025 (www.justkannada.in): ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್​ (ಬಲೆಗೆ ಬೀಳಿಸುವ ಯತ್ನ ನಡೆದಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿದ್ದು,  ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಭಾರಿ ಚರ್ಚೆಯಾಗಿದೆ.

ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, ನನಗಿರೋ ಮಾಹಿತಿಯಂತೆ ಒಬ್ಬರು, ಇಬ್ಬರೂ ಇಲ್ಲ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದರಲ್ಲಿ ಸಿಲುಕಿದ್ದಾರೆ. 48 ಜನ ಈ ಸಿಡಿನಲ್ಲಿ ಇದ್ದಾರೆ ಎಂದರು.

48 ಜನರ ಪೆನ್ ಡ್ರೈವ್ ಮಾಡಿಕೊಂಡಿದ್ದಾರೆ.  ಕರ್ನಾಟಕ ಸಿಡಿ ಪೆನ್ ಡ್ರೈವ್ ಕಾರ್ಖಾನೆಯಾಗಿದೆ. ರಾಜ್ಯಕ್ಕೆ ಮಾತ್ರವಲ್ಲದೆ ರಾಷ್ಟ್ರಮಟ್ಟದವರೆಗೂ ಇದು ಹಬ್ಬಿದೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡಿತ್ತೇನೆ.  ಇದರ ಹಿಂದೆ ಯಾರೇ ಇದ್ದರೂ ಹೊರಬರಬೇಕು. ಇದರ ಹಿಂದಿರುವ ನಿರ್ದೇಶಕರು ಯಾರೆಂದು ತಿಳಿಯಲಿ ಎಂದು ಒತ್ತಾಯಿಸಿದರು.

ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ -ಗೃಹ ಸಚಿವ ಪರಮೇಶ್ವರ್

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ರಾಜಣ್ಣ ಅವರು ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ನನ್ನ ಮೇಲಿನ ಪ್ರಕರಣ ಏನು ಮಾಡುತ್ತೀರಿ ಎಂದು ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರ ಗೃಹ ಸಚಿವ ಪರಮೇಶ್ವರ್​ ಅವರನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್, ನೀವು ಲಿಖಿತವಾಗಿ ದೂರು ಕೊಡಿ ಎಂದು ಸಲಹೆ ನೀಡಿದರು.

Key words: Honeytrap, Discussion, session, Minister, KN Rajanna