ಬೆಂಗಳೂರು ಜನವರಿ,11,2025 (www.justkannada.in): ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ದುರಾದೃಷ್ಟವಶಾತ್ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಿ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಎಡಿಎಲ್ ಆರ್ ಗಳಿಗೆ ಸೂಚಿಸಿದರು.
ವಿಕಾಸಸೌಧದಿಂದ ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಎಡಿಎಲ್ಆರ್ (ಭೂ ದಾಖಲೆಯ ಸಹಾಯ ನಿರ್ದೇಶಕ) ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೃಷ್ಣಭೈರೇಗೌಡ, “ಅಕ್ರಮ-ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಜಮೀನು ಪಡೆಯಲು ಅರ್ಹರು. ಅಂತವರಿಗೆ ಸಾಗುವಳಿ ಚೀಟಿ ನೀಡುವುದು ಸರ್ಕಾರದ ಕರ್ತವ್ಯ. ಒಂದು ವೇಳೆ ಅರ್ಜಿ ಸಲ್ಲಿಸಿದವರು ಮೃತಪಟ್ಟಿದ್ದರೆ ಅವರಿಗೆ ಸಂಬಂಧಿಸಿದ ಅರ್ಹ ಕುಟುಂಬಸ್ಥರಿಗೆ ಜಮೀನು ಮಂಜೂರುಗೊಳಿಸಬೇಕು” ಎಂದು ತಿಳಿಸಿದರು.
ಅನುಕೂಲಸ್ಥರಿಗೆ ಎಲ್ಲಾ ಮಾಹಿತಿ ಇರುತ್ತದೆ. ತಮಗೆ ಬೇಕಾದ ಸರ್ಕಾರಿ ಸವಲತ್ತನ್ನು ತಾವಾಗಿಯೇ ಪಡೆದುಕೊಳ್ಳುತ್ತಾರೆ. ಆದರೆ, ಬಡವರಿಗೆ, ಸಮಾಜದ ಕಟ್ಟಕಡೆಯ ಸ್ತರದಲ್ಲಿ ಬದುಕುತ್ತಿರುವವರಿಗೆ ಮಾಹಿತಿ ಕೊರತೆ ಇರುತ್ತದೆ. ಇಂತವರಿಗೆ ಅಧಿಕಾರಿಗಳೇ ಮಾಹಿತಿ ನೀಡಿ ಸರ್ಕಾರಿ ಸವಲತ್ತುಗಳನ್ನು ತಲುಪಿಸಬೇಕು. ಬಗರ್ ಹುಕುಂ ಅರ್ಜಿ ಅರ್ಹವಾಗಿದ್ದಲ್ಲಿ ಅಧಿಕಾರಿಗಳೇ ಜವಾಬ್ದಾರಿ ವಹಿಸಿಕೊಂಡು ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಅಧಿಕಾರಿಗಳನ್ನು ಪ್ರಶಂಸಿಸಿದ ಅವರು, “ಜನವರಿ 15ರ ಒಳಗೆ 15,000 ಫಲಾನುಭವಿಗಳಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ಈ ಗುರಿಯನ್ನು ಸಾಧಿಸಲಾಗದಿದ್ದರೂ ಇದೇ ಅವಧಿಯಲ್ಲಿ ಕನಿಷ್ಟ 5600ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿರುವುದು ಹಾಗೂ ಎಲ್ಲಾ ಜಿಲ್ಲೆ-ತಾಲೂಕುಗಳಲ್ಲೂ ಈ ಸಂಬಂಧ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರುವುದು ಉತ್ತಮ ಬೆಳವಣಿಗೆ. ಶೀಘ್ರವೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರುಗೊಳಿಸಿ” ಎಂದು ಕಿವಿಮಾತು ಹೇಳಿದರು
ನಮೂನೆ 1 to 5 ಪೋಡಿ ದುರಸ್ಥಿಗೆ ಒತ್ತಡ:
ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದಲೇ ಕಳೆದ ಸೆಪ್ಟೆಂಬರ್ 2 ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಚಾಲನೆ ನೀಡಲಾಯಿತು. ಆದರೆ, ಹಲವಾರು ತಾಲೂಕುಗಳಲ್ಲಿ 1-5 ನಮೂನೆ ಪೋಡಿ ದುರಸ್ಥಿ ಮುಗಿದಿದ್ದರೂ ಸಂಬಂಧಪಟ್ಟ ಫೈಲುಗಳನ್ನು 6-10 ನಮೂನೆ ಸರ್ವೇ ಕೆಲಸಕ್ಕಾಗಿ ಭೂ ದಾಖಲೆಯ ಸಹಾಯ ನಿರ್ದೇಶಕರಿಗೆ ಕಳುಹಿಸಲು ತಹಶೀಲ್ದಾರರುಗಳು ಮೀನಾಮೇಷ ಎಣಿಸುತ್ತಿರುವುದು ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.
ಬಳ್ಳಾರಿ ತಾಲೂಕಿನಲ್ಲಿ ಈವರೆಗೆ 397 ಹಾಗೂ ಬೆಳಗಾವಿಯಲ್ಲಿ 147 ಪ್ರಕರಣಗಳಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸ ಮುಗಿದಿದೆ. ಆದರೆ, ಯಾವ ಪ್ರಕರಣವನ್ನು ತಹಶೀಲ್ದಾರರು ಮುಂದಿನ ಹಂತದ ಕೆಲಸಕ್ಕಾಗಿ ಎಡಿಎಲ್ ಆರ್ಗಳಿಗೆ ಕಳುಹಿಸಿಲ್ಲ. ಇದೇ ರೀತಿ ಚಿಕ್ಕೋಡಿ, ಅಥಣಿ, ಔರಾದ್, ಬೀದರ್ ಚಿತ್ರದುರ್ಗ, ಚಾಮರಾಜನಗರ, ಗುಂಡ್ಲುಪೇಡೆ, ಹುಮ್ನಾಬಾದ್, ಚಳ್ಳಕೆರೆ ಹೊಳಲ್ಕೆರೆ ಸೇರಿದಂತೆ ಹಲವಾರು ತಾಲೂಕುಗಳಲ್ಲಿ ದುರಸ್ಥಿ ಕೆಲಸ ಮುಗಿದಿದ್ದರೂ ಎಡಿಎಲ್ಆರ್ ಗಳಿಗೆ ಕಳುಹಿಸಿರುವ ಫೈಲುಗಳ ಸಂಖ್ಯೆ ಶೂನ್ಯ. ಜನರೇನು ನಿಮ್ಮ ಬಳಿ ಬಂದು ಸಲಾಂ ಹೊಡೆಯಬೇಕು ಎಂದು ನೀವು ಹೀಗೆ ಕಾಯಿಸುತ್ತಿದ್ದೀರಾ?” ಎಂದು ತಹಶೀಲ್ದಾರರ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.
ತಹಶೀಲ್ದಾರರು 1-5 ನಮೂನೆ ಪೋಡಿ ದುರಸ್ಥಿ ಕೆಲಸ ಮುಗಿಸಿ ಎಡಿಎಲ್ ಆರ್ ಗೆ ಕಳುಹಿಸಿದರೆ ಮಾತ್ರ ಸರ್ವೇ ಕೆಲಸ ಮುಗಿಸಿ ಜನರಿಗೆ ಸೂಕ್ತ ದಾಖಲೆ ನೀಡುವುದು ಸಾಧ್ಯ. ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಚೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದರೂ ಸಹ ಅಧಿಕಾರಿಗಳು ಹೀಗೆ ಮಂದಗತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ವರ್ಷಗಳಿಗಿಂತ ಹೆಚ್ಚುಕಾಲ ಬಾಕಿ ಉಳಿದಿರುವ ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡಲು ಸಮಸ್ಯೆ ಏನು ಎಂದು ತಹಶೀಲ್ದಾರರ ವಿರುದ್ಧ ಸಚಿವರು ಕಿಡಿಕಾರಿದರು.
ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ತಕರಾರು ಅರ್ಜಿಗಳನ್ನು ಉಳಿಸಿಕೊಳ್ಳುವಂತಿಲ್ಲ. ಆದರೆ, ಕಳೆದ ವರ್ಷ 10,750ಕ್ಕೂ ಅಧಿಕ ಪ್ರಕರಣಗಳನ್ನು ಬಾಕಿ ಉಳಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಅಭಿಯಾನ ಮಾದರಿಯಲ್ಲಿ 10,000ಕ್ಕೂ ಅಧಿಕ ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಆದರೆ, ಉಳಿದ ಪ್ರಕರಣಗಳ ವಿಲೇಗೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಏಕೆ? ಕೆಲವರು ಮಾಡುತ್ತಿರುವ ಕೆಲಸದಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು” ಎಂದು ಅವರು ಅಭಿಪ್ರಾಯಪಟ್ಟರು.
ಮುಂದುವರೆದು, “ರಾಯಭಾಗ 9, ಹುಕ್ಕೇರಿ 20, ರಾಮದುರ್ಗ 6, ಬೀದರ್ 6, ಬಳ್ಳಾರಿ 4, ಸವದತ್ತಿ 4 ಹೊಳಲ್ಕೆರೆ 9, ಕಾಗವಾಡ 5, ಚನ್ನಗಿರಿ 5, ಕಡೂರು 8, ಹೊಸಕೋಟೆ 12, ಮಂಡ್ಯ 11, ಮಾಗಡಿ 18, ಕನಕಪುರ 14, ಹಾರೋಹಳ್ಳಿ 20, ರಾಮದುರ್ಗ 10, ಬೆಂಗಳೂರು ಪಶ್ಚಿಮ 10, ನೆಲಮಂಗಲ 8 ಸೇರಿದಂತೆ 20 ತಾಲೂಕುಗಳಲ್ಲಿ ವರ್ಷಕ್ಕಿಂತ ಅಧಿಕ ಸಮಯದ ಅಲ್ಪ ಪ್ರಮಾಣದ ಪ್ರಕರಣಗಳು ಬಾಕಿ ಉಳಿದಿವೆ. ಅಧಿಕಾರಿಗಳು ಶೀಘ್ರದಲ್ಲಿ ಈ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಜನರಿಗೆ ನ್ಯಾಯ ಕಲ್ಪಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
Key words: Bagar Hukum, application, land, Minister, Krishna Byre Gowda