ಕರ್ನಾಟಕದವರು ಕಡಲೆ ಬೀಜ ತಿನ್ನಬೇಕಾ?  ಕೇಂದ್ರ ಬಜೆಟ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಕಿಡಿ

ಬೆಂಗಳೂರು, ಫೆಬ್ರವರಿ, 1,2025 (www.justkannada.in):  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮಂಡಿಸಿದ ಕೇಂದ್ರ ಬಜೆಟ್ ​​ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೃಷ್ಣಭೈರೇಗೌಡ, ಈ ಬಾರಿ ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ಚೊಂಬು ಸಿಕ್ಕಿದೆ. ಕೇಂದ್ರದ ಬಜೆಟ್​​ ಕರ್ನಾಟಕದ ಪಾಲಿಗೆ ಕರಾಳವಾಗಿದೆ. ಕೇಂದ್ರದ ಬಜೆಟ್​ನಿಂದ ರಾಜ್ಯದ ಯಾವುದೇ ಬೇಡಿಕೆ ಈಡೇರಿಲ್ಲ. ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ ಎಂದು ಕಿಡಿಕಾರಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸೆ ಕೂಡ ನೀಡಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕಕ್ಕೆ ಏನೂ ನೀಡಿಲ್ಲ. ಬೆಂಗಳೂರು ನಗರ ಹೆಚ್ಚು ಉದ್ಯೋಗ ಅವಕಾಶ ನೀಡಿದೆ. ರಫ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ನೀಡುತ್ತಿದೆ. ಆದರೆ ಬೆಂಗಳೂರಿಗೆ ಯಾವುದೇ ಅನುದಾನ ಘೋಷಿಸಿಲ್ಲ. ಸರ್ಕಾರದ ಪರವಾಗಿ ಇದನ್ನು​​​ ನಾನು ಖಂಡಿಸುತ್ತೇನೆ  ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯದ ಜನರ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ಬಜೆಟ್ ನಲ್ಲಿ ಬಿಹಾರ ರಾಜ್ಯಕ್ಕೆ ಐದಾರು ಯೋಜನೆಗಳನ್ನು ನೀಡಿದ್ದಾರೆ. ಹಾಗಾದರೆ ಕರ್ನಾಟಕದವರು ಕಡಲೆ ಬೀಜ ತಿನ್ನಬೇಕಾ? ಎಂದು ಸಚಿವ ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

Key words: central budget, Minister, Krishnabhairegowda