ಬೆಂಗಳೂರು,ಮಾರ್ಚ್,1,2025 (www.justkannada.in): ಇತ್ತೀಚೆಗೆ ನಡೆಸಲಾದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಆಗುರುವ ಹೂಡಿಕೆ ಒಡಂಬಡಿಕೆಗಳ ಪರುಣಾಮಕಾರಿ ಅನುಷ್ಠಾನಕ್ಕೆ ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟು ನಿರ್ದೇಶನ ನೀಡಿದ್ದಾರೆ.
ಈ ಸಂಬಂಧವಾಗಿ ಸಚಿವ ಎಂ.ಬಿ ಪಾಟೀಲ್ ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಐಎಡಿಬಿ, ಉದ್ಯೋಗ ಮಿತ್ರ, ಭುಸ್ವಾಧೀನ ವಿಭಾಗ ಮತ್ತು ಇನ್ವೆಸ್ಟ್ ಕರ್ನಾಟಕ ಫೋರಂನ ಉನ್ನತ ಅಧಿಕಾರಿಗಳ ಜತೆ ಇಲ್ಲಿನ ಖನಿಜ ಭವನದಲ್ಲಿ ಮಹತ್ವದ ಸಭೆ ನಡೆಸಿದರು.
ಹೂಡಿಕೆದಾರರು ಭಾರೀ ನಿರೀಕ್ಷೆಯೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಭೂಮಿಯ ಲಭ್ಯತೆ, ಸ್ವಾಧೀನ ಪ್ರಕ್ರಿಯೆ, ಇರಬಹುದಾದ ವಿವಾದಗಳ ಇತ್ಯರ್ಥ, ಈಗಾಗಲೇ ಸರಕಾರದ ಮಟ್ಟದಲ್ಲಿ ಇರುವ ಭೂಮಿ ಇವುಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.
ಸುಗಮ ಹೂಡಿಕೆಗೆ ಕೈಗಾರಿಕಾ ಇಲಾಖೆಯು ಉದ್ಯಮಿಸ್ನೇಹಿ ಏಕಗವಾಕ್ಷಿ ವ್ಯವಸ್ಥೆಯನ್ನು ಕೂಡ ರೂಪಿಸಿದೆ. ಈ ಬಗ್ಗೆ ಕೂಡ ಸಂಬಂಧಿಸಿದ ಉಳಿದ ಇಲಾಖೆಗಳ ಅಧಿಕಾರಿಗಳಲ್ಲೂ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಕೈಗಾರಿಕಾ ಯೋಜನೆಗಳ ಜತೆ ಕಂದಾಯ, ಅರಣ್ಯ, ಇಂಧನ, ನಗರಾಭಿವೃದ್ಧಿ, ಮಾಲಿನ್ಯ ನಿಯಂತ್ರಣ ಮಂಡಲಿ, ಬಿಡಬ್ಲ್ಯುಎಸ್ಎಸ್ ಬಿ ಮುಂತಾದ ಇಲಾಖೆಗಳು ನಿಕಟ ಸಂಬಂಧ ಹೊಂದಿವೆ. ಈ ಇಲಾಖೆಗಳಿಂದ ಕೂಡ ಕೈಗಾರಿಕಾ ಯೋಜನೆಗಳಿಗೆ ಅನುಮತಿ ಅಗತ್ಯವಾಗಿದೆ. ಇವೆಲ್ಲವುಗಳ ಜೊತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಬೇಕು ಎಂದು ಎಂ.ಬಿ ಪಾಟೀಲ್ ಸಭೆಯಲ್ಲಿ ಗಮನ ಸೆಳೆದು ಮನದಟ್ಟು ಮಾಡಿದ್ದಾರೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಐಕೆಎಫ್ ಹೆಚ್ಚುವರಿ ನಿರ್ದೇಶಕ ಶಿವಕುಮಾರ, ಜಗದೀಶ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.
Key words: Investors, Conference, Minister, M.B. Patil, speedy implementation, agreements