ಬೆಂಗಳೂರು,ಮಾರ್ಚ್,4,2025 (www.justkannada.in): ಇತ್ತೀಚೆಗೆ ನಡೆಸಲಾದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 98 ಕಂಪನಿಗಳು ಸರಕಾರದೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದಗಳ ಮೂಲಕ 6,23,970 ಕೋಟಿ ರೂ. ಬಂಡವಾಳ ಹರಿದು ಬರಲಿದೆ. ಉಳಿದಂತೆ, 1,101 ಕಂಪನಿಗಳಿಂದ 4,03,533 ಕೋಟಿ ರೂ. ಹೂಡಿಕೆ ಆಗಲಿದ್ದು, ಸಂಬಂಧಿಸಿದ ಸಮಿತಿಗಳು ಇದಕ್ಕೆ ಅನುಮೋದನೆ ನೀಡಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಎಸ್ ವಿ ಸುಂಕನೂರ ಕೇಳಿದ ಪ್ರಶ್ನೆಗೆ ಅವರು ಮಂಗಳವಾದ ಉತ್ತರ ನೀಡಿದರು.
`ಇನ್ವೆಸ್ಟ್ ಕರ್ನಾಟಕ-2025’ರಲ್ಲಿ ರಾಜ್ಯದ 2,892, ಹೊರರಾಜ್ಯಗಳ 286 ಮತ್ತು ವಿದೇಶಗಳ 72 ಹೂಡಿಕೆದಾರ ಉದ್ಯಮಿಗಳು ಪಾಲ್ಗೊಂಡಿದ್ದರು. ಈಗಾಗಲೇ ಒಡಂಬಡಿಕೆಗೆ ಅಂಕಿತ ಹಾಕಿರುವ 98 ಕಂಪನಿಗಳು ಏರೋಸ್ಪೇಸ್, ಆಟೋ ಮತ್ತು ಇ.ವಿ, ಸಿಮೆಂಟ್ ಮತ್ತು ಉಕ್ಕು, ಇಎಸ್ಡಿಎಂ, ಆಹಾರ ಸಂಸ್ಕರಣೆ ಮತ್ತು ಕೃಷಿ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್, ಆರ್ &ಡಿ ಮತ್ತು ಜಿಸಿಸಿ, ಮರುಬಳಕೆ ಇಂಧನ ಹಾಗೂ ಔಷಧ ತಯಾರಿಕೆ ವಲಯಗಳಿಗೆ ಸೇರಿವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಈ ಹೂಡಿಕೆಗಳು ರಾಜ್ಯದ 21 ಜಿಲ್ಲೆಗಳಲ್ಲಿ ಆಗಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 30 ಕಂಪನಿಗಳು 26,331 ಕೋಟಿ ರೂ. ಹೂಡಿಕೆ ಮಾಡಲಿದ್ದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 14 ಕಂಪನಿಗಳು 35,297 ಕೋಟಿ ರೂ. ಬಂಡವಾಳ ತೊಡಗಿಸಲಿವೆ. ಉಳಿದ ಜಿಲ್ಲೆಗಳಲ್ಲಿ 54 ಯೋಜನೆಗಳಿಗೆ ವಿವಿಧ ಕಂಪನಿಗಳು ಹಣ ಹಾಕಲಿವೆ. ವಲಯಗಳ ಪೈಕಿ ಸಾಮಾನ್ಯ ಉತ್ಪಾದನಾ ವಲಯದಲ್ಲಿ ಗರಿಷ್ಠ 23 ಒಡಂಬಡಿಕೆಗಳಾಗಿವೆ ಎಂದು ಅವರು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.
2022ರಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 57 ಹೂಡಿಕೆ ಒಡಂಬಡಿಕೆಗಳ ಮೂಲಕ 5.41 ಲಕ್ಷ ಕೋಟಿ ರೂ. ಹೂಡಿಕೆ ಬರುವುದೆಂದು ಹೇಳಲಾಗಿತ್ತು. ಈ ಪೈಕಿ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ 20 ಕಂಪನಿಗಳ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಇದರಿಂದ 2.01 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಲಿದೆ. ಹೆಚ್ಚಿನವು ಬೃಹತ್ ಯೋಜನೆಗಳಾಗಿದ್ದು, ಇವುಗಳ ನೈಜ ಅನುಷ್ಠಾನಕ್ಕೆ 3ರಿಂದ 5 ವರ್ಷ ಹಿಡಿಯುತ್ತದೆ ಎಂದು ಪಾಟೀಲ ನುಡಿದಿದ್ದಾರೆ.
ಒಪ್ಪಂದಕ್ಕೆ ಸಹಿ ಮಾಡಿದರೂ ಅನುಷ್ಠಾನ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಈ ಬಾರಿ ಆಗಿರುವ ಒಪ್ಪಂದಗಳಲ್ಲಿ ಕನಿಷ್ಠ ಶೇ 70ರಷ್ಟು ಹೂಡಿಕೆ ಆಗುವ ವಿಶ್ವಾಸ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿನ ಇನ್ಫೋಸಿಸ್ ಕ್ಯಾಂಪಸ್ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ ಎಂಬುದನ್ನು ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಎಲ್ಲ ಸದಸ್ಯರು ಸಚಿವರ ಗಮನಕ್ಕೆ ತಂದರು. ಈ ಸಂಬಂಧ ಮತ್ತೊಮ್ಮೆ ಸಭೆ ಮಾಡಿ, ಕ್ಯಾಂಪಸ್ ಕಾರ್ಯಾರಂಭ ಮಾಡುವಂತೆ ಸೂಚಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಭರವಸೆ ನೀಡಿದರು.
Key words: Invest Karnataka, agreements, 98 companies, Minister, M.B. Patil