ಬೆಂಗಳೂರು,ಏಪ್ರಿಲ್,16,2025 (www.justkannada.in): ರಾಜ್ಯ ರಾಜಧಾನಿ ಮತ್ತು ವಿಜಯಪುರ ನಡುವಿನ ರೈಲು ಪ್ರಯಾಣದ ಅವಧಿಯನ್ನು ಈಗಿರುವ 14-15 ಗಂಟೆಗಳಿಂದ ಕನಿಷ್ಠ 10 ಗಂಟೆಗಳಿಗೆ ಇಳಿಸುವ ಸಂಬಂಧ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅವರು ಈ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಇಂದು ಸಚಿವ ಎಂ.ಬಿ ಪಾಟೀಲ್ ಅವರು ಸಂಬಂಧಿಸಿದ ಇಲಾಖೆಗಳು ಮತ್ತು ನೈರುತ್ಯ ರೈಲ್ವೆಯ ಉನ್ನತಾಧಿಕಾರಿಗಳ ಜತೆ ರಾಜ್ಯದ ಎಲ್ಲ ರೈಲ್ವೇ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂಬಂಧ ಸದ್ಯದಲ್ಲೇ ಮತ್ತೊಂದು ಸಭೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು- ವಿಜಯಪುರ ನಡುವೆ ಸಂಚರಿಸುವ ಕೆಲವೊಂದಿಷ್ಟು ರೈಲುಗಳನ್ನಾದರೂ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸುವಂತೆ ಮಾಡಿದರೆ ಆ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎನ್ನುವುದನ್ನು ಸಚಿವರು ಅಂಕಿ ಸಂಖ್ಯೆ ಸಮೇತ ರೈಲ್ವೆ ಅಧಿಕಾರಿಗಳಿಗೆ ವಿವರಿಸಿದರು.
‘ಬೆಂಗಳೂರು-ವಿಜಯಪುರ ನಡುವೆ 712 ಕಿ.ಮೀ. (ರೈಲ್ವೆ ದೂರ) ಅಂತರವಿದ್ದು, ಕೆಲವೊಮ್ಮೆ ಪ್ರಯಾಣಕ್ಕೆ 15-16 ಗಂಟೆ ಹಿಡಿಯುತ್ತಿದ್ದು, ತ್ರಾಸದಾಯಕವಾಗಿದೆ. ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆ ಕಡೆಗೆ ಹೋಗುವ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ರೈಲು ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಹೋಗಬೇಕಾಗಿವೆ. ಜತೆಗೆ ಗದಗದಲ್ಲಿ ಕೂಡ ಎಂಜಿನ್ ಬದಲಾವಣೆಗೆ ನಿಲ್ಲಬೇಕಾಗಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ರೈಲುಗಳು ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲೇ (ಹುಬ್ಭಳ್ಳಿ ಬೈಪಾಸ್) ಗದಗದ ಕಡೆಗೆ ತಿರುವು ಪಡೆದುಕೊಂಡು ಸಂಚರಿಸಬೇಕು’ ಎಂದಿದ್ದಾರೆ.
ಹುಬ್ಭಳ್ಳಿ ಬೈಪಾಸ್ ಮೂಲಕ ಈಗಾಗಲೇ ಗೂಡ್ಸ್ ರೈಲುಗಳು ಮುಂದಕ್ಕೆ ಸಾಗುತ್ತಿವೆ. ಪ್ರಯಾಣಿಕರ ರೈಲುಗಳೂ ಈ ಮಾರ್ಗದಲ್ಲಿ ಸಂಚಾರ ಆರಂಭಿಸಬೇಕು. ಇದರಿಂದ ಬೆಂಗಳೂರಿನಿಂದ ಹುಬ್ಬಳ್ಳಿಗೆ ಈ ರೈಲುಗಳನ್ನು ಏರುವವರ ಸಂಖ್ಯೆ ಕಡಿಮೆಯಾಗಲಿದೆ. ಮುಂದೆ ಗದಗದಲ್ಲೂ ಬೈಪಾಸ್ ಇದ್ದು, ಅಲ್ಲಿಂದಲೇ ವಿಜಯಪುರದ ಕಡೆಗೆ ರೈಲು ಸಾಗುವಂತೆ ಮಾಡಬೇಕು. ಇದರಿಂದ, ಹುಬ್ಭಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಾವಣೆಗೆ ಸಮಯ ವ್ಯರ್ಥವಾಗುವುದು ತಪ್ಪಲಿದೆ. ಇದೊಂದು ಸಣ್ಣ ಉಪಕ್ರಮದಿಂದ ಬೆಂಗಳೂರು-ವಿಜಯಪುರ ನಡುವಿನ ಪ್ರಯಾಣದಲ್ಲಿ ಕನಿಷ್ಠ 2 ಗಂಟೆಗಳಷ್ಟು ಸಮಯ ಉಳಿಸಬಹುದು ಎಂದು ಅವರು ಹೇಳಿದ್ದಾರೆ. ಸಚಿವರ ಈ ಚಿಂತನೆಯನ್ನು ರೈಲ್ವೆ ಅಧಿಕಾರಿಗಳು ಮೆಚ್ಚಿಕೊಂಡಿದ್ದು, ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳ ಜತೆ ಮಾತುಕತೆ ನಡೆಸುವ ಭರವಸೆ ನೀಡಿದರು.
ಈಗ ಗದಗ-ವಿಜಯಪುರ ನಡುವೆ ಜೋಡಿಹಳಿ ಹಾಕುವ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಗಲಕೋಟೆ ಸಮೀಪ ಮಾತ್ರ ಸ್ವಲ್ಪ ಕಾಮಗಾರಿ ಬಾಕಿ ಇದೆ. ಜೊತೆಗೆ ಈಗ ನಡೆಯುತ್ತಿರುವ ರೈಲ್ವೆ ವಿದ್ಯುದೀಕರಣವನ್ನು ಆದಷ್ಟು ಬೇಗನೆ ಮುಗಿಸಿದರೆ, ಈ ಮಾರ್ಗದಲ್ಲಿ ವಂದೇಭಾರತ್ ರೈಲು ಸಂಚಾರ ಆರಂಭಕ್ಕೆ ಕ್ರಮ ಕೈಗೊಳ್ಳಬಹುದು ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದ್ದಾರೆ.
ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗ
ಕಿತ್ತೂರು ಕರ್ನಾಟಕ ಭಾಗದಲ್ಲಿ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ ಮಂಜೂರಾತಿ ಸಿಕ್ಕಿದೆ. ಆದರೆ, ಮಮ್ಮಿಗಟ್ಟಿ ಬಳಿ ಮಾರ್ಗ ಬದಲಾವಣೆಗೆ ಒತ್ತಡ ಬರುತ್ತಿದೆ. ಹೀಗಾಗಿ ಭೂಸ್ವಾಧೀನ ತಡವಾಗುತ್ತಿದೆ. ಈ ಕುರಿತು ಸದ್ಯದಲ್ಲೇ ಸ್ಥಳೀಯರೊಂದಿಗೆ ಸಭೆ ನಡೆಸಲಾಗುವುದು ಎಂದು ಪಾಟೀಲ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ಅಡಚಣೆ ನಿವಾರಿಸುವಂತೆ ಸಲಹೆ ನೀಡಿದರು.
ಬಾಗಲಕೋಟೆ-ಕುಡಚಿ ಯೋಜನೆಯಲ್ಲೂ ಖಜ್ಜಿದೋಣಿ-ಲೋಕಾಪುರ ನಡುವೆ ಜಮೀನು ಕಳೆದುಕೊಂಡಿರುವ ರೈತರು ಹೆಚ್ಚಿನ ಪರಿಹಾರ ಕೇಳುತ್ತಿದ್ದು, ಕೆಲಸ ಮಾಡಲು ಬಿಡುತ್ತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಜತೆ ದೂರವಾಣಿ ಮೂಲಕ ಮಾತನಾಡಿ, ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಯಾದವಾಡ ಸಮೀಪ ಕೂಡ 7 ಎಕರೆ ಸ್ವಾಧೀನವು ಒಂದು ವರ್ಷದಿಂದ ಹಾಗೆಯೇ ಇದೆ. ಈ ಸಂಬಂಧ ಚಿಕ್ಕೋಡಿ ಉಪವಿಭಾಗಾಧಿಕಾರಿ ಜತೆ ಸಚಿವರು ಮಾತನಾಡಿ ಶೀಘ್ರ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಗದಗ- ಕುಡಚಿ ನಡುವೆ ಅಗತ್ಯವಿರುವ 148 ಎಕರೆ ಜಮೀನನನ್ನು 3 ತಿಂಗಳಲ್ಲಿ ಕೊಡಲಾಗುವುದು. ಇದರ ಜತೆಗೆ ಈ ಯೋಜನೆಗೆ ಇನ್ನೂ 100 ಎಕರೆ ಅಗತ್ಯವಿದೆ. ಈ ಜಮೀನಿಗೆ ಈಗಾಗಲೇ ಪರಿಹಾರ ಕೊಡಲಾಗಿದೆ. ಆದರೂ ಕೆಲವರು ಕೋರ್ಟಿಗೆ ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕುಷ್ಟಗಿ-ಜಿಮಲಾಪುರ ಯೋಜನೆಗೆ ಬೇಕಿರುವ 47 ಎಕರೆಯನ್ನು ಆದಷ್ಟು ಬೇಗ ಒದಗಿಸಲಾಗುವುದು. ಈ ಭಾಗದಲ್ಲಿ ಲಿಂಗನಬಂಡ-ಕುಷ್ಟಗಿ ನಡುವೆ ರೈಲು ಓಡಿಸಲು ಕ್ರಮ ವಹಿಸಬೇಕು ಎಂದು ಎಂ.ಬಿ ಪಾಟೀಲ್ ಸೂಚನೆ ನೀಡಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗ
ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಕ್ಕೆ ಬೇಕಾದ ಭೂಸ್ವಾಧೀನ ಬಹುತೇಕ ಮುಗಿದಿದ್ದು, ಇನ್ನು 95 ಎಕರೆ ಜಮೀನು ಅಗತ್ಯವಿದೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 37 ಎಕರೆ ಮತ್ತು ತುಮಕೂರು ಜಿಲ್ಲೆಯ ಸರಹದ್ದಿನಲ್ಲಿ 58.3 ಎಕರೆ ಭೂಮಿ ಸ್ವಾಧೀನ ಬಾಕಿ ಇದೆ. ಇದಕ್ಕೆ ಹಣಕಾಸು ಇಲಾಖೆಯ ಮುಂದೆ 45 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ. ಈ ಪ್ರಕ್ರಿಯೆ 3-4 ತಿಂಗಳಲ್ಲಿ ಮುಗಿಯಬೇಕು. ಹಾಗೆಯೇ, ತುಮಕೂರು-ರಾಯದುರ್ಗ ಯೋಜನೆಗೆ ಭೂಸ್ವಾಧೀನ ಬಹುತೇಕ ಮುಗಿದಿದ್ದು, ಇನ್ನು 17 ಎಕರೆ ಮಾತ್ರ ಬಾಕಿ ಇದೆ. ಇನ್ನೊಂದು ತಿಂಗಳಲ್ಲಿ ಜಮೀನು ಹಸ್ತಾಂತರ ಆಗಬೇಕು ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದ್ದಾರೆ.
ಹುಬ್ಭಳ್ಳಿ-ಅಂಕೋಲಾ ಮಾರ್ಗದಲ್ಲಿ ಪ್ರಗತಿ
ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಹುಬ್ಭಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮೊದಲ ಹಂತದ ಅನುಮೋದನೆ ಸಿಕ್ಕಿದ್ದು, ಮತ್ತೊಂದು ಒಪ್ಪಿಗೆ ಇನ್ನೊಂದು ತಿಂಗಳಲ್ಲಿ ಸಿಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಜಂಟಿಯಾಗಿ ಜಾಗ ಸ್ವಾಧೀನ ಮಾಡಿಕೊಂಡು, ಯೋಜನೆ ಜಾರಿ ಮಾಡಿದರೆ ಉಪಯುಕ್ತವೆಂಬ ಚಿಂತನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಸಚಿವ ಪಾಟೀಲ್ ಅವರಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಆದಷ್ಟು ಬೇಗ ಈ ಮಾರ್ಗ ನಿರ್ಮಾಣ ಮಾಡಬೇಕೆಂದು ಸಚಿವರು ಸೂಚಿಸಿದರು.
ಬೆಂಗಳೂರು-ಮಂಗಳೂರು ಮಾರ್ಗ:
ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ರೈಲ್ವೆ ಮಾರ್ಗ ಇಕ್ಕಟ್ಟನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರವಾಗಿ ಪರ್ಯಾಯ ಮಾರ್ಗ ಅಭಿವೃದ್ಧಿಪಡಿಸಬೇಕೇ ಅಥವಾ ಈಗಿರುವ ಮಾರ್ಗದ ಪಕ್ಕದಲ್ಲೇ ಜೋಡಿಹಳಿ ಮಾಡಬೇಕೇ ಅಥವಾ ಎತ್ತರಿಸಿದ ಮಾರ್ಗ ಮಾಡಬೇಕೇ ಎಂಬುದು ಚಿಂತಿಸಲಾಗುತ್ತಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ, ಜಂಟಿ ಕಾರ್ಯದರ್ಶಿ ಗೋವಿಂದ ರೆಡ್ಡಿ, ಕೆಐಎಡಿಬಿ ಸಿಇಒ ಡಾ.ಮಹೇಶ, ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ, ರೈಲ್ವೆ ಮುಖ್ಯ ಎಂಜಿನಿಯರ್ ಡಿ.ವಿ.ಪ್ರಸಾದ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಜೊತೆಗೆ ಸಂಬಂಧಿತ ಯೋಜನೆಗಳ ಭೂಸ್ವಾಧೀನಾಧಿಕಾರಿಗಳು ಹಾಜರಿದ್ದರು.
ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ
ಭೂಸ್ವಾಧೀನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆ ಸಲುವಾಗಿ ಕರೆದಿರುವ ಮಹತ್ತ್ವದ ಸಭೆಗಳಿಗೆ ಕೆಲವು ಹಿರಿಯ ಅಧಿಕಾರಿಗಳು ಕೋರ್ಟ್ ಕಲಾಪ ಇತ್ಯಾದಿ ನೆಪ ಹೇಳಿಕೊಂಡು, ಕಿರಿಯ ಅಧಿಕಾರಿಗಳನ್ನು ಕಳಿಸುತ್ತಿರುವುದು ಸರಿಯಲ್ಲ. ಹಿಂದಿನ ಸಭೆಗಳಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಮುಂದಿನ ಬಾರಿಯಿಂದ ಸಂಬಂಧಿಸಿದ ನಿರ್ದಿಷ್ಟ ಅಧಿಕಾರಿಗಳೇ ಖುದ್ದಾಗಿ ಬರಬೇಕು. ಇಲ್ಲದೆ ಹೋದರೆ, ಅಮಾನತು ಮಾಡಲು ಶಿಫಾರಸು ಮಾಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
Key words: Bengaluru-Vijayapura, train, Minister, M.B. Patil