ಸಿಇಟಿ ಅರ್ಜಿ ಭರ್ತಿ ಮತ್ತಷ್ಟು ಸರಳ, ಭದ್ರತೆಗೆ ಒತ್ತು- ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

ಬೆಂಗಳೂರು,ಜನವರಿ,13,2025 (www.justkannada.in):  ಸಿಇಟಿ ಅರ್ಜಿ ಭರ್ತಿ ಮಾಡುವುದನ್ನು ಸರಳಗೊಳಿಸುವ ಮತ್ತು ಹಾಲಿ ಇರುವ ವ್ಯವಸ್ಥೆಗೆ ಮತ್ತಷ್ಟು ಭದ್ರತಾ ಉಪಕ್ರಮಗಳನ್ನು ಅಳವಡಿಸುವ ಮೂಲಕ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೋಮವಾರ ಇಲ್ಲಿ ಹೇಳಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಲ್ಲೇಶ್ವರದ ಕಚೇರಿಯಲ್ಲಿ ನಡೆದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದರು. ಇದೇ ಸಂದರ್ಭದಲ್ಲಿ ಕೆಸೆಟ್‌-24ರಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ಪತ್ರ ವಿತರಿಸಿದರು.

ನಂತರ ಸಚಿವ ಸುಧಾಕರ್ ಮಾತನಾಡಿ, ಗ್ರಾಮೀಣ ಭಾಗದವರು ಸೈಬರ್‌ ಕೇಂದ್ರಗಳಿಗೆ ಹೋಗದೇ ಮೊಬೈಲ್‌ ಮೂಲಕವೇ ಸಿಇಟಿ ಅರ್ಜಿ ಭರ್ತಿ ಮಾಡುವ ಹಾಗೆ ಮಾಡಲಾಗುವುದು. ಅಕ್ರಮಗಳಿಗೂ ಅವಕಾಶ ಇಲ್ಲದಂತೆ ಭದ್ರತಾ ಕ್ರಮಗಳನ್ನೂ ಸೇರಿಸಲಾಗುವುದು. ಸದ್ಯದಲ್ಲೇ ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಮಾತ್ರ ನೋಂದಣಿ ಮಾಡುವ ವ್ಯವಸ್ಥೆಯ ಪೋರ್ಟಲ್‌ ಗೂ ಚಾಲನೆ ನೀಡಿದರು. ಒಮ್ಮೆ ನೋಂದಣಿ ಮಾಡಿದವರು ವಿವಿಧ ರೀತಿಯ ನೇಮಕಾತಿ ಪರೀಕ್ಷೆಗಳಿಗೆ ಪದೇ ಪದೇ ಅರ್ಜಿ ಭರ್ತಿ ಮಾಡುವ ಅಗತ್ಯ ಇರುವುದಿಲ್ಲ. ನಿರ್ದಿಷ್ಟ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಪರೀಕ್ಷಾ ಶುಲ್ಕ ಕಟ್ಟಿ ಅರ್ಹತೆಯನ್ನು ಪಡೆಯಬಹುದು. ಇದು ಕೆಇಎ ಮಾಡಿರುವ ವಿನೂತನ ಕ್ರಮ ಎಂದು ಸಚಿವ ಎಂ.ಸಿ ಸುಧಾಕರ್  ವಿವರಿಸಿದರು.

ಕಂಪ್ಯೂಟರ್‌ ಆಧಾರಿತ ಪರೀಕ್ಷೆ:

ನೇಮಕಾತಿ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಈ ಸಂಬಂಧ ಈಗಾಗಲೇ ಕೆಪಿಎಸ್‌ ಸಿ, ರಾಜೀವ್‌ ಗಾಂಧಿ ಆರೋಗ್ಯ ವಿವಿ ಸೇರಿದಂತೆ ಇತರ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿದೆ. ಸದ್ಯಕ್ಕೆ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿರುವ ಪರೀಕ್ಷೆಗಳನ್ನು ಈ ರೀತಿ ಮಾಡಿ, ನಂತರದ ದಿನಗಳಲ್ಲಿ ಎಲ್ಲ ಪರೀಕ್ಷೆಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದು ಹೇಳಿದರು.

ಸಿಇಟಿ ಕೈಪಿಡಿ ಬಿಡುಗಡೆ:

2025ನೇ ಸಾಲಿನ ಸಿಇಟಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವ “ಸಿಇಟಿ ದಿಕ್ಸೂಚಿʼ ಕೈಪಿಡಿಯನ್ನೂ ಸಚಿವ ಎಂ.ಸಿ ಸುಧಾಕರ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಹನ್ನೆರಡು ಪುಟಗಳ ಕೈಪಿಡಿಯನ್ನು ಸರ್ಕಾರಿ, ಅನುದಾನಿತ, ನವೋದಯ ಮತ್ತು ಕೇಂದ್ರೀಯ ವಿದ್ಯಾಲಯಗಳ ಪಿಯುಸಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

30 ಕೋಟಿ ರೂ ವೆಚ್ಚದಲ್ಲಿ ಕಟ್ಟಡ

ಮಲ್ಲೇಶ್ವರದಲ್ಲಿನ ಕೆಇಎ ಹಾಲಿ ಕಟ್ಟಡಕ್ಕೆ ಹೊಂದಿಕೊಂಡೇ ಹೆಚ್ಚುವರಿಯಾಗಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಕೆಇಎ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕೆ ಪರೀಕ್ಷೆ ಮತ್ತು ಕೌನ್ಸೆಲಿಂಗ್‌ ನಡೆಸುವುದಲ್ಲದೆ, ನೇಮಕಾತಿ ಪರೀಕ್ಷೆಗಳನ್ನೂ ಮಾಡುತ್ತಿದೆ. 2024ನೇ ಸಾಲಿನಲ್ಲಿ ದಾಖಲೆಯ 17 ನೇಮಕಾತಿ ಪರೀಕ್ಷೆಗಳನ್ನು ನಡೆಸಿ 6,052 ಮಂದಿಯ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಹೀಗಾಗಿ ಹೆಚ್ಚುವರಿ ಕಟ್ಟಡದ ಅಗತ್ಯ ಇದೆ. ಹಾಗೆಯೇ ಕೆಇಎ ಸಿಬ್ಬಂದಿ ಒಂದು ವರ್ಷದಲ್ಲಿ ದಾಖಲೆ ಸಂಖ್ಯೆಯ 17 ನೇಮಕಾತಿ ಪರೀಕ್ಷೆ ಮತ್ತು ಒಟ್ಟು 29.28 ಲಕ್ಷ ಅರ್ಜಿಗಳ ನಿರ್ವಹಣೆ ಮಾಡುವುದರ ಮೂಲಕ ಜನ ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

‌ಪ್ರತ್ಯೇಕ ಸರ್ವರ್:

ಕೆಇಎನಲ್ಲಿ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ಸರ್ವರ್‌ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಪ್ರತ್ಯೇಕವಾದಂತಹ ಸರ್ವರ್‌ ಹೊಂದುವ ಬಗ್ಗೆಯೂ ಚಿಂತನೆ ನಡೆದಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯುವ ಉದ್ದೆಶವೂ ಇದೆ ಎಂದು ಹೇಳಿದರು.

ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳ ದಿನಾಂಕಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಸಚಿವ ಸುಧಾಕರ್ ಅವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರೂ ಆದ ಶಾಸಕ ಶಿವಲಿಂಗೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಜೆ.ಗದ್ಯಾಳ, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸ ಗೌಡ, ವಿಶ್ರಾಂತ ಕುಲಪತಿ ಪ್ರೊ ತಿಮ್ಮೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Key words: CET, application, simpler, security, Minister, Dr. M.C. Sudhakar