ತುಮಕೂರು,ನ,21,2019(www.justkannada.in): ಕುರುಬ ಸಮುದಾಯದ ಸ್ವಾಮೀಜಿ ಈಶ್ವರನಂದ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಕ್ಷಮೆಕೇಳುವಂತೆ ಆಗ್ರಹಿಸಿ ಕುರುಬ ಸಮುದಾಯದ ವತಿಯಿಂದ ಹುಳಿಯಾರು ಬಂದ್ ಗೆ ಕರೆ ನೀಡಲಾಗಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ವೃತ್ತಕ್ಕೆ ಕನಕದಾಸರ ಹೆಸರು ಇಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯವಿತ್ತು. ಈ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಈಶ್ವರಾನಂದ ಸ್ವಾಮೀಜಿಗಳ ವಿರುದ್ದ ಏರುಧ್ವನಿಯಲ್ಲಿ ಮಾತನಾಡಿದ್ದರು.
ಸಚಿವರ ವರ್ತನೆ ವಿರುದ್ದ ಕುರುಬ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಈ ಬಗ್ಗೆ ಸಚಿವ ಮಾಧುಸ್ವಾಮಿ ಪರವಾಗಿ ಕ್ಷಮೆಯಾಚಿಸಿದ್ದರು. ಆದರೆ ಸಚಿವ ಮಾಧುಸ್ವಾಮಿ ಅವರು ಕ್ಷಮೆ ಕೇಳಿಲ್ಲ. ಹೀಗಾಗಿ ಸಚಿವರ ಕ್ಷಮೆಯಾಚನೆಗೆ ಪಟ್ಟು ಹಿಡಿದು ಕುರುಬ ಸಮುದಾಯದ ಒಕ್ಕೂಟ ಹುಳಿಯಾರು ಬಂದ್ ಗೆ ಕರೆ ನೀಡಿದ್ದು ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಸಚಿವರ ರಾಜೀನಾಮೆಗೆ ಆಗ್ರಹಿಸಿ ಹುಳಿಯಾರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಲಾಗುತ್ತಿದ್ದು ಸಚಿವ ಮಾಧುಸ್ವಾಮಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: Minister Madhuswamy –apologize-tumakur-huliyaru-bandh