ಶಾಸಕರ ಸಸ್ಪೆಂಡ್: ಸ್ಪೀಕರ್ ನಡೆ ಸಮರ್ಥಿಸಿಕೊಂಡ ಸಚಿವ ಮಹದೇವಪ್ಪ: ಹನಿಟ್ರ್ಯಾಪ್ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ

ಮೈಸೂರು,ಮಾರ್ಚ್,22,2025 (www.justkannada.in): ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನ 6 ತಿಂಗಳ ಕಾಲ ಸದನದಿಂದ ಅಮಾನತು ಮಾಡಿದ ಸ್ಪೀಕರ್ ಯುಟಿ ಖಾದರ್ ನಡೆಯನ್ನ ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಸಮರ್ಥಿಸಿಕೊಂಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಹೆಚ್ ಸಿ ಮಹದೇವಪ್ಪ,  ನಿನ್ನೆ ಸದನದಲ್ಲಿ ವಿರೋಧ ಪಕ್ಷದ ನಡೆದುಕೊಂಡ ರೀತಿಯನ್ನು ಖಂಡಿಸಿದರು.  ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಸ್ಪೀಕರ್ ಮೇಲೆ ಪೇಪರ್ ಎಸೆಯೋದು ಮಿತಿ ಮೀರಿ ವರ್ತನೆ ಮಾಡೋದು ಸರಿಯಲ್ಲ ಎಂದರು.

18 ಜನರನ್ನು ಸ್ಪೀಕರ್ ಅಮಾನತು ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಕಾರ್ಯಕಲಾಪ ಅಡ್ಡಿ ಪಡಿಸುವ ಘಟನೆ ರಾಜ್ಯದಲ್ಲಿ ಎಂದು ನಡೆದಿಲ್ಲ. ನಿನ್ನೆ ಆ ಘಟನೆ ನಡೆಯಿತು. ಶಾಸಕರು ಬಳಸುವ ಭಾಷೆ ಕಳಪೆಯಾಗಿದೆ. ದ್ವೇಷ ಭಾಷಣ ಹೆಚ್ಚಾಗಿದೆ. ಇದರಿಂದ ಪ್ರಜಾಪ್ರಭುತ್ವದ ನಡವಲಿಕೆಗೆ  ಕಪ್ಪು ಚುಕ್ಕೆ ಬರುತ್ತೆ. 18 ಜನರ ಅಮಾನತು ತೀರ್ಮಾನ ಸ್ಪೀಕರ್ ಮಾಡಿದ್ದಾರೆ. ಎಲ್ಲವನ್ನೂ ನೋಡಿಯೇ ತೀರ್ಮಾನ ಮಾಡಿದ್ದಾರೆ ಎಂದು ಸ್ಪೀಕರ್ ನಡೆಯನ್ನು ಸಚಿವ ಮಹದೇವಪ್ಪ ಸಮರ್ಥಿಸಿಕೊಂಡರು.

ಹನಿಟ್ರ್ಯಾಪ್: ಇಂತಹ ಕೆಲಸ ಮಾಡುವವರಿಗೆ ಉಗ್ರ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೊಸ ಕಾಯ್ದೆ ತರಬೇಕು

ರಾಜ್ಯದಲ್ಲಿ ಸಚಿವರ ಹನಿ ಟ್ರ್ಯಾಪ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಇದೊಂದು ಪಿತೂರಿ. ಈ ಹಿಂದಿನಿಂದಲೂ ಇದು ನಡೆಯುತ್ತಾ ಬಂದಿದೆ. ಇದಕ್ಕೆ ಸಂಬಂಧಿಸಿದ ಕಾಯ್ದೆ ತರಬೇಕು. ದುರುದ್ದೇಶದ ಈ ಪಿತೂರಿ ಮಾಡುವ ಗುಂಪುಗಳನ್ನು ಮಟ್ಟ ಹಾಕಬೇಕು. ಖಾಸಗಿತನದ ಗೌಪ್ಯತೆ ಧಕ್ಕೆ ತರುತ್ತಿದ್ದಾರೆ. ಇಂತಹ ಕೆಲಸ ಮಾಡುವವರಿಗೆ ಉಗ್ರ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೊಸ ಕಾಯ್ದೆ ತರಬೇಕು ಎಂದರು.

ಹನಿಟ್ರ್ಯಾಪ್ ಸ್ವಪಕ್ಷದವರೇ ಮಾಡಿದ್ದಾರೆ ಎಂಬ ಸಚಿವ ರಾಜಣ್ಣ ಅನುಮಾನ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ರಾಜಣ್ಣ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಗೊತ್ತಿಲ್ಲ. ತನಿಖೆ ಆಗಲಿ ಯಾರಾದ್ರೂ ಸರಿ ಸತ್ಯ ಹೊರಗಡೆ ಬರಲಿ. ಸುಮ್ಮನೆ ಅವರು ಇವರು ಅನ್ನೋದು ಸರಿಯಲ್ಲ. ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳಲಿ. ನಾನು ನನ್ನ ರಾಜಕೀಯ ಇತಿಹಾಸದಲ್ಲಿ ಈ ರೀತಿ ಟ್ರ್ಯಾಪ್ ಗಳನ್ನ ನೋಡಿಲ್ಲ. ರಾಜ್ಯದ ರಾಜಕೀಯ ನೈತಿಕ ಅಧಃಪತನದತ್ತ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲೋ ಅಂತ ಇಲ್ಲಿ ಹೇಳಿದ್ರೆ ಅಲ್ಲೂ ಹಲೋ ಅಂತಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಡಿಕೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಸಿಎಂ ಅವರ ಆರೋಗ್ಯ, ಹಾಗೂ ರಾಜಕೀಯ ಆರೋಗ್ಯ ಎರಡು ಚೆನ್ನಾಗಿದೆ. ಫೈನಾನ್ಸ್ ಸಿಎಂ ಹತ್ತಿರನೇ ಇದೆ. ಮುಂದಿನ ಬಜೆಟ್ ಕೂಡ ಅವರೇ ಮಂಡಿಸುತ್ತಾರೆ. ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಅವರ ಮನೆಯಲ್ಲೇ ಎಲ್ಲವೂ ಸರಿಯಿಲ್ಲ ಎಂದು  ಬಿಜೆಪಿ ನಾಯಕರಿಗೆ ಸಚಿವ ಮಹದೇವಪ್ಪ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಪರ ಇದ್ದೋರನ್ನ ಟಾರ್ಗೆಟ್ ಮಾಡ್ತಿದ್ದಾರೆಯೇ ಎಂಬ  ವಿಚಾರ, ಸಚಿವ ಹೆಚ್.ಸಿ ಮಹದೇವಪ್ಪ, ಆ ರೀತಿ ನನಗೆ ಎಂದು ಅನಿಸಲ್ಲ. ಮಾಡುತ್ತಿದ್ದರು ಮಾಡುತ್ತಿರಬಹುದು. ನಾನು ಕೂಡ ಸಿಕ್ಕ ಸಿಕ್ಕವರಿಗೇ ಹೈ ಹಲೋ ಹೇಳಿದ್ದೀನಿ ಎಂದು ನಗುತ್ತಾ ಮಾಧ್ಯಮದ ಪ್ರಶ್ನೆಗೆ ಸಚಿವ ಮಹದೇವಪ್ಪ ಉತ್ತರಿಸಿದರು.

Key words: MLAs, suspended, Minister Mahadevappa, defends, Speaker