ಬೆಂಗಳೂರು,ಆಗಸ್ಟ್,25,2022(www.justkannada.in): ಸರ್ಕಾರದ ವಿರುದ್ಧ 40% ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 7 ದಿನದೊಳಗೆ ಲೋಕಾಯುಕ್ತರಿಗೆ ದೂರು ನೀಡಬೇಕು. ದೂರು ನೀಡಿಲ್ಲ ಅಂದರೆ ಕ್ಷಮೆ ಕೇಳಬೇಕು. ಇಲ್ಲವಾದರೆ ಕೆಂಪಣ್ಣ ಸೇರಿ ಎಲ್ಲ ಸದಸ್ಯರ ವಿರುದ್ಧ ಮಾನನಷ್ಟ ಮೊಕದ್ದಮೆ, ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಸಚಿವ ಮುನಿರತ್ನ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಮುನಿರತ್ನ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಳೆದ 14 ತಿಂಗಳಿಂದ ಆರೋಪ ಮಾಡುತ್ತಲೇ ಇದ್ದಾರೆ. ಆದರೆ ಯಾವುದೇ ದಾಖಲೆ ನೀಡಿಲ್ಲ. ಯಾವುದೇ ದಾಖಲೆ ಕೊಡದೆ ಪ್ರಧಾನ ಮಂತ್ರಿಗಳಿಗೂ ಪತ್ರ ಬರೆದಿದ್ದಾರೆ. ವಿರೋಧ ಪಕ್ಷದ ನಾಯಕರ ಮನೆಗೆ ಭೇಟಿ ನೀಡಿ ನಂತರ ಮಾಧ್ಯಮ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದರು.
ಕೆಂಪಣ್ಣ ನನ್ನ ವಿರುದ್ಧ ಆರೋಪ ಮಾಡಿರುವುದು ನೋವಾಗಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಮೇಲೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧಾರ ಮಾಡಿದ್ದೇನೆ. ಸಂಘದ ಎಲ್ಲರ ಮೇಲೂ ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದರು.
Key words: Minister -Muniratna – 7 days -deadline – contractors association