ಚಿಕ್ಕಬಳ್ಳಾಪುರ ಮಾರ್ಚ್,31,2021(www.justkannada.in): ಕ್ರೀಡಾಂಗಣ ಎಂದರೆ ದೇವಸ್ಥಾನ ಇದ್ದಂತೆ. ಅತ್ಯಂತ ಶ್ರದ್ಧೆಯಿಂದ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಗೌಡ ಸೂಚಿಸಿದರು.
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣ, ಈಜುಕೊಳಗಳನ್ನ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವ್ಯವಸ್ಥೆಯನ್ನು ನೋಡಿ ಸಚಿವ ನಾರಾಯಣಗೌಡ ಕಿಡಿಕಾರಿದರು. ಮಕ್ಕಳೆ ನಮ್ಮ ದೇಶದ ಭವಿಷ್ಯ. ಆದರೆ ಮಕ್ಕಳು ಬಳಸುವ ಕ್ರೀಡಾಂಗಣ, ಈಜುಕೊಳ, ಒಳಾಂಗಣ ಕ್ರೀಡಾಂಗಣ ಎಲ್ಲಿಯೂ ಸ್ವಚ್ಚತೆ ಇಲ್ಲ. ಶೌಚಾಲಯ, ಸ್ನಾನಗೃಹ ಎಲ್ಲವೂ ಅವ್ಯವಸ್ಥೆಯ ಆಗರವಾಗಿದೆ. ನಿಮ್ಮ ಮನೆಯನ್ನೂ ಇದೇ ರೀತಿ ಇರಿಸಿಕೊಂಡಿದ್ದೀರಾ. ಸರ್ಕಾರದ ಆಸ್ತಿ ಎಂದರೆ ಅಷ್ಟೊಂದು ನಿರ್ಲಕ್ಷ್ಯವೇ ಎಂದು ಸಚಿವ ಡಾ. ನಾರಾಯಗೌಡ ಅಧಿಕಾರಿಗಳ ಮೇಲೆ ಗರಂ ಆದರು.
ಇನ್ನೊಮ್ಮೆ ಬಂದಾಗ ಇಂಥ ಸ್ಥಿತಿ ಇದ್ದರೆ ಸುಮ್ಮನೆ ಇರೋದಿಲ್ಲ. ಬೇಕಾಬಿಟ್ಟಿಯಾಗಿ ಕೆಲಸ ಮಾಡಕೂಡದು. ಈಜುಕೊಳ ಸ್ವಚ್ಚಗೊಳಿಸಿ ತಕ್ಷಣ ಮಕ್ಕಳಿಗೆ ಅಭ್ಯಾಸಕ್ಕೆ ಲಭ್ಯವಾಗುವಂತೆ ಮಾಡಬೇಕು. ಸುತ್ತಲಿನ ಪರಿಸರ ಹಸಿರಿನಿಂದ ಕೂಡಿರುವಂತೆ ಮಾಡಬೇಕು. ತೋಟಗಾರಿಕೆ ಇಲಾಖೆಯಿಂದ ಉತ್ತಮ ಗಿಡಗಳನ್ನು ತಂದು ನೆಡಿ. ತುಕ್ಕು ಹಿಡಿದಿರುವ ಕಬ್ಬಿಣದ ವಸ್ತುಗಳನ್ನ ಕ್ರೀಡಾಂಗಣದ ಆವರಣದಲ್ಲಿ ಇಡಕೂಡದು. ಆಸಕ್ತಿಯಿಂದ ಕೆಲಸ ಮಾಡಿ. ದೇಶದ ಭವಿಷ್ಯವಾಗಿರುವ ಮಕ್ಕಳ ಏಳಿಗೆಗಾಗಿ ಕೆಲಸ ಮಾಡಿ. ಮತ್ತೆ ಬಂದಾಗ ಪರಿಸ್ಥಿತಿ ಸುಧಾರಿಸದಿದ್ದರೆ ಕ್ರಮತೆಗೆದುಕೊಳ್ಳುತ್ತೇನೆ ಎಂದು ಸಚಿವ ನಾರಾಯಣಗೌಡ ಎಚ್ಚರಿಕೆ ನೀಡಿದರು.
Key words: Minister – Narayana Gowda –outrage-against- officer-chikkaballapur