ರಾಯಚೂರಿಗೆ ಏಮ್ಸ್‌:  1000 ದಿನಗಳ ಹೋರಾಟ-ಸಚಿವ ಎನ್ ಎಸ್ ಭೋಸರಾಜು

ಬೆಂಗಳೂರು,ಫೆಬ್ರವರಿ,5,2025 (www.justkananda.in)  ರಾಯಚೂರಿಗೆ ಏಮ್ಸ್‌ ಗಾಗಿ  1000 ದಿನಗಳ ಹೋರಾಟ , ಕೇಂದ್ರ ಸರಕಾರ ತಕ್ಷಣ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಬೇಕು. ಇಲ್ಲದಿದ್ದಲ್ಲಿ ಈ ಅನ್ಯಾಯದ ವಿರುದ್ದ ಕರ್ನಾಟಕದ ಜನತೆ ಕೇಂದ್ರ ಸರಕಾರದ ವಿರುದ್ದ ಹೋರಾಟ ನಡೆಸಲಿದೆ ಎಂದು   ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ   ಎನ್ ಎಸ್ ಭೋಸರಾಜು ಹೇಳಿದರು.

ಅವರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಈ ಕೆಳಕಂಡಂತಿದೆ

• ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ರಾಯಚೂರು ಪ್ರಮುಖವಾಗಿದೆ
• ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯನ್ನು 2013 ರಲ್ಲಿ ಯುಪಿಎ ಸರಕಾರ ಭಾರತೀಯ ಸಂವಿಧಾನ ಆರ್ಟಿಕಲ್‌ 371 ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿತ್ತು.
• ತದನಂತರ ಕೇಂಧ್ರ ಸರಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ರಾಯಚೂರ ಕೂಡಾ ಒಂದಾಗಿದೆ.
• ಈ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ರಾಷ್ಟ್ರಮಟ್ಟದ ಆರೋಗ್ಯ ಹಾಗೂ ಶೈಕ್ಷಣಿಕ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕು, ಆ ಮೂಲಕ ಆ ಭಾಗದ ಅಭಿವೃದ್ದಿಗೆ ಕೇಂದ್ರ ಸರಕಾರ ಸಹಕಾರ ನೀಡಬೇಕು ಎನ್ನುವ ಸಲಹೆಗಳು ನಂಜುಂಡಪ್ಪ ವರದಿಯಲ್ಲೂ ಪ್ರಸ್ತಾಪಿಸಲಾಗಿತ್ತು.
• ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆ ಮಾಡುವಂತೆ ಹಲವಾರು ಬಾರಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು, ಸಂಘಟನೆಗಳು ಮಾಡಿರುವ ಮನವಿ ಇಲ್ಲಿಯವರೆಗೂ ಕೇಂದ್ರ ಸರಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ.
• ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆ ಆಗಲೇ ಬೇಕು ಈ ಮೂಲಕ ಈ ಭಾಗದ ಅಭಿವೃದ್ದಿಗೆ ಕೇಂದ್ರ ಸರಕಾರ ಸಹಕಾರ ನೀಡಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ.
• ಈ ನಿಟ್ಟಿನಲ್ಲಿ ಆರಂಭವಾದ ಅನಿರ್ಧಿಷ್ಟಾವಧಿ ಹೋರಾಟ ಇಂದು 1000 ದಿನಗಳಿಗೆ ಕಾಲಿಟ್ಟಿದೆ.

ರಾಯಚೂರಿನ ಮೇಲೆ ಕೇಂದ್ರ ಸರಕಾರದಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಗಧಾಪ್ರಹಾರ:
– ಸಂವಿಧಾನದ ಆಶಯದಂತೆ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದು ಕೇಂದ್ರ ಸರಕಾರದ ಆದ್ಯ ಕರ್ತವ್ಯ.
– ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಕ್ಕೂಟ ವ್ಯವಸ್ಥೆಯೇ ತಲೆಕೆಳಗಾಗಿದೆ.
– ಕೇಂದ್ರ ಸರಕಾರ ರಾಜ್ಯಗಳ ಮನವಿಗಳಿಗೆ ಸರಿಯಾಗಿ ಸ್ಪಂದಿಸದೇ ಸಂವಿಧಾನದ ಆಶಯಗಳ ವಿರುದ್ದ ಕೆಲಸ ಮಾಡುತ್ತಿದೆ.
– 2003 ರಲ್ಲಿ ಜಾರಿಯಾದ PMSSY ಪ್ರಧಾನ ಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ, ಆರೋಗ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಾರಿಯಾದ ಯೋಜನೆ.
– ದೇಶದ ವಿವಿಧ ಭಾಗಗಳಲ್ಲಿ ಏಮ್ಸ್‌ ಆಸ್ಪತ್ರೆಗಳನ್ನು ಪ್ರಾರಂಭಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು.
– ಈ ಯೋಜನೆಯ ಅಡಿಯಲ್ಲಿ ಈಗಾಗಲೇ ದೇಶದ 22 ರಾಜ್ಯಗಳಲ್ಲಿ ಕೇಂದ್ರ ಸರಕಾರ ಏಮ್ಸ್‌ಗಳನ್ನು ಮಂಜೂರುಗೊಳಿಸಿದೆ.
– ಇದೇ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದ ರಾಯಚೂರಿಗೆ ಏಮ್ಸ್‌ ಮಂಜೂರುಗೊಳಿಸುವಂತೆ ಹಲವಾರು ಬಾರಿ ಮುಖ್ಯಮಂತ್ರಿಗಳು, ಮಂತ್ರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮನವಿಗಳನ್ನು ಸಲ್ಲಿಸಿವೆ.
– ಒಟ್ಟಾರೆಯಾಗಿ ಹತ್ತಕ್ಕೂ ಹೆಚ್ಚು ಬಾರಿ ನಮ್ಮ ಸರಕಾರ ಕೇಂದ್ರ ಸರಕಾರಕ್ಕೆ ವಿವಿಧ ಹಂತಗಳಲ್ಲಿ ಮನವಿ ಸಲ್ಲಿಸಿದೆ.
– 22 ಆಗಸ್ಟ್‌ 2023 ರಂದು ಮಾನ್ಯ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ನನ್ನ ನೇತೃತ್ವದ ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು.
– ಆ ನಂತರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೂ ಪತ್ರ ಬರೆದು ಮನವಿ ಸಲ್ಲಿಸಿದ್ದರು.
– ಆದರೂ, ಕರ್ನಾಟಕ ರಾಜ್ಯ ಅದರಲ್ಲೂ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವ ಪ್ರಸ್ತಾವನೆಗೆ ಕೇಂದ್ರ ವಿತ್ತ ಮಂತ್ರಾಲಯ ಇನ್‌ ಪ್ರಿನ್ಸಿಪಲ್‌ ಒಪ್ಪಿಗೆಯನ್ನು ನೀಡಲು ಹಿಂಜರಿದಿದೆ.
– ಈ ವಿಷಯವನ್ನ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಆರೋಗ್ಯ ಸಚಿವರಾಗಿರುವ ಜಗತ್‌ ಪ್ರಕಾಶ್‌ ನಡ್ಡಾ ಅವರು 14 ನೇ ಜನವರಿ 2025 ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
– ಹಾಗೆಯೇ, ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆಯ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ತಿಳಿಸದೇ, ಎನ್‌ಹೆಚ್‌ಎಂ NHM ಅಡಿಯಲ್ಲಿ ನೀಡಲಾಗುತ್ತಿರುವ ಅನುದಾನದದಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
– ಪ್ರೋಗ್ರಾಮ್‌ ಇಂಪ್ಲಿಮೆಂಟೇಷನ್‌ ಪ್ಲಾನ್‌ ನ PIP ಅಡಿಯ ನ್ಯಾಷನಲ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ಅನುದಾನವನ್ನು ಪ್ರೈಮರಿ ಹಾಗೂ ಸೆಕಂಡರಿ ಆರೋಗ್ಯ ಕೇಂದ್ರಗಳ ಅಭಿವೃದ್ದಿಗಾಗಿ ಬಳಸುವುದು ಕಡ್ಡಾಯವಾಗಿದೆ. ಅಲ್ಲದೇ, ಎನ್‌ಹೆಚ್‌ಎಂ NHM ಅನುದಾನದ ಶೇಕಡಾ 70 ರಷ್ಟು ಅನುದಾನ ಆಶಾ ಕಾರ್ಯಕರ್ತೆಯರು ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವೇತನಕ್ಕೆ ವ್ಯವಯವಾಗುತ್ತಿದೆ. ಇನ್ನುಳಿದ ಶೇಕಡಾ 30 ರಷ್ಟು ಹಣ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ವ್ಯಯವಾಗುತ್ತದೆ.
– ಹಾಗೆಯೇ, ಪಿಎಂ-ಅಭಿಮ್‌ (PM ABHIM)ಯೋಜನೆಯ ಅಡಿಯಲ್ಲಿ ನೀಡಿರುವ ಅನುದಾನವನ್ನು ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದಲ್ಲಿ CCB (Critical Care Hospital Block), IPHL (Integrated Public Health Laboratories), UHWC- Urban Health and Wellness Centre ಗಳನ್ನು ಸ್ಥಾಪಿಸಲು ನೀಡಲಾಗುತ್ತದೆ. ಅಲ್ಲದೇ, ಈ ಅನುದಾನಗಳನ್ನು ಡಯಾಗ್ನೋಸ್ಟಿಕ್ಸ್‌, ಎಮರ್ಜನ್ಸಿ ಕೇರ್‌ ಮತ್ತು Infectious Disease Managementಗೆ ಬಳಸಬೇಕಾಗುತ್ತದೆ.
– NHM ಯೋಜನೆಯ ಅಡಿಯಲ್ಲಿ 2021-22 ರಿಂದ 2024-25 ನೇ ಸಾಲಿಗೆ 4648 ಕೋಟಿ ರೂಪಾಯಿಗಳು, PM-ABHIM ಅಡಿಯಲ್ಲಿ 194 ಕೋಟಿ ರೂಪಾಯಿಗಳ ಅನುದಾನ ನೀಡಿರುವ ಬಗ್ಗೆ ಕೇಂದ್ರದ ಆರೋಗ್ಯ ಮಂತ್ರಿಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕೇವಲ ಇಷ್ಟೇ ಅನುದಾನದಲ್ಲಿ ನಾವು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದರ ಜೊತೆಯಲ್ಲೇ
– ಐಮ್ಸ್‌ನಂತಹ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ಸಾಧ್ಯವೇ? ಬೇರೆಲ್ಲಾ ರಾಜ್ಯಗಳ ಕಣ್ಣಿಗೆ ಬೆಣ್ಣೆ ಸವರುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಕಣ್ಣಿಗೆ ಸುಣ್ಣ ಸವರುವುದು ಸರಿಯೇ?
– PMSSY ಅಡಿಯಲ್ಲಿ ಇತರ ರಾಜ್ಯಗಳಿಗೆ ಈಗಾಗಲೇ 22 ಏಮ್ಸ್‌ಗಳನ್ನು ಮಂಜೂರು ಮಾಡಿರುವ ಕೇಂದ್ರ ಸರಕಾರ, NHM ಮತ್ತು PM-ABHIM ಯೋಜನೆಗಳ ಅಡಿಯಲ್ಲಿ ಪರ್ಯಾಯ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮಗಳನ್ನು ಯೋಜಿಸುವಂತೆ ಕರ್ನಾಟಕ ರಾಜ್ಯವನ್ನು ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
– ಕರ್ನಾಟಕದ ಬಗ್ಗೆ ಈ ಮಲತಾಯಿ ವರ್ತನೆ ಏಕೆ? ಏಮ್ಸ್ ಕೇವಲ ಆಸ್ಪತ್ರೆಯಲ್ಲ – ಇದು ಪ್ರಮುಖ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಾಗಿದೆ ಮತ್ತು ರಾಯಚೂರು ಏಮ್ಸ್‌ ಪಡೆಯಲು ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ
– ಕನ್ನಡಿಗರ ಕಡೆಗಿನ ಈ ತಾರತಮ್ಯ ಸರಿಯಲ್ಲ.
– “ಕೇಂಧ್ರ ಸರಕಾರ ಕರ್ನಾಟಕ ರಾಜ್ಯವು ತನ್ನ ಹಕ್ಕಿಗಾಗಿ ನಿರಂತರವಾಗಿ ಹೋರಾಟ ಮಾಢುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ”.
– ಇತರ ರಾಜ್ಯಗಳಲ್ಲಿ ಏಮ್ಸ್ ಮಂಜೂರು ಮಾಡಿದಂತೆ ರಾಯಚೂರಿನ ಬಗ್ಗೆಯೂ ತಕ್ಷಣದ ನಿರ್ಧಾರವನ್ನು ಕೈಗೊಳ್ಳುತಂತೆ ನಾವು ಒತ್ತಾಯಿಸುತ್ತೇವೆ. ಕರ್ನಾಟಕದ ಜನರು ಈ ರೀತಿಯ ಅನ್ಯಾಯವನ್ನು ಇನ್ನು ಮುಂದೆ ಸಹಿಸುವುದಿಲ್ಲ”.
– ಬಿಜೆಪಿ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ರಾಯಚೂರಿನ ಜಿಲ್ಲೆಯ ಬಗ್ಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಎಲ್ಲಾ ಮಾಹಿತಿಯಿದೆ.
– ನಮ್ಮ ರಾಜ್ಯದ ನಾಲ್ಕೂ ಜನ ಕೇಂದ್ರ ಸಚಿವರು ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ.
– ರಾಜ್ಯ ಬಿಜೆಪಿ ನಾಯಕರು ಆ ಭಾಗದ ಜನರ ಅಪೇಕ್ಷೆ ಹಾಗೂ ಅಭ್ಯದಯಕ್ಕಾಗಿ ಮುತುವರ್ಜಿವಹಿಸಬೇಕು.
– ರಾಯಚೂರು ಜಿಲ್ಲೆಯಲ್ಲಿ ಏಮ್ಸ್‌ ಮಂಜೂರು ಮಾಡುವಂತೆ ಜನರು ನಡೆಸುತ್ತಿರುವ ಹೋರಾಟ ಇಂದು ಸಾವಿರ ದಿನಕ್ಕೆ ಕಾಲಿಟ್ಟಿದೆ.
– ಇದನ್ನ ಪರಿಗಣಿಸಿ ಕೇಂದ್ರ ಸರಕಾರ ತಕ್ಷಣ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಬೇಕು.
– ಇಲ್ಲದಿದ್ದಲ್ಲಿ ಈ ಅನ್ಯಾಯದ ವಿರುದ್ದ ಕರ್ನಾಟಕದ ಜನತೆ ಕೇಂದ್ರ ಸರಕಾರದ ವಿರುದ್ದ ಹೋರಾಟ ನಡೆಸಲಿದೆ