ಪಕ್ಷೇತರರಿಗೆ ಮಂತ್ರಿ ಸ್ಥಾನ ಪಕ್ಕಾ, ಕೈ ಶಾಸಕರ ಅಪಸ್ವರ

ಬೆಂಗಳೂರು:ಜೂ-3: ಇಬ್ಬರು ಪಕ್ಷೇತರರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಮಿತ್ರಪಕ್ಷಗಳ ನಾಯಕರ ನಿಲುವಿಗೆ ಕಾಂಗ್ರೆಸ್‌ನ ಸಚಿವಾಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆಯೂ ವಾರಾಂತ್ಯದೊಳಗೆ ಪಕ್ಷೇತರರಾದ ಆರ್‌.ಶಂಕರ್‌ ಮತ್ತು ನಾಗೇಶ್‌ ಸಂಪುಟ ಸೇರ್ಪಡೆ ಖಚಿತವೆನ್ನಲಾಗಿದೆ.

ಈ ಸಂಬಂಧ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ರಾತ್ರಿ ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಪಕ್ಷೇತರರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಪ್ರಸ್ತಾವಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ನಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇದರಿಂದಾಗಿ ಸಂಪುಟ ಪುನಾರಚನೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಹಲವು ಶಾಸಕರಿಗೆ ನಿರಾಸೆಯಾಗಿದೆ.

ಪಕ್ಷೇತರರಿಗೆ ಮಂತ್ರಿ ಸ್ಥಾನ ನೀಡಿದರೆ ಸರಕಾರ ಸುಭದ್ರವಾಗುವುದು ಹೇಗೆ ?, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದರೆ ಮತ್ತೆ ಸಮಸ್ಯೆ ಎದುರಾಗುತ್ತದೆ. ಸಂಪುಟ ಪುನರ್‌ ರಚನೆಯ ಭರವಸೆ ನೀಡಿ ಈ ಪ್ರಕ್ರಿಯೆಯನ್ನು ಖಾಲಿ ಸ್ಥಾನ ಭರ್ತಿ ಮಾಡಲು ಸೀಮಿತಗೊಳಿಸುತ್ತಿರುವುದು ಸರಿಯಲ್ಲ ಎಂದು ಅತೃಪ್ತ ಶಾಸಕರು ಕಾಂಗ್ರೆಸ್‌ ನಾಯಕರ ಮುಂದೆ ಹೇಳಿಕೊಂಡಿದ್ದಾರೆ.

ಅಳತೆಗೆ ಸಿಗದ ಜಾರಕಿಹೊಳಿ

ಈ ಮಧ್ಯೆ ಬಂಡಾಯ ನಾಯಕ ರಮೇಶ್‌ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ವಿಫಲವಾಗಿದೆ. ಜೆಡಿಎಸ್‌ ಕೋಟಾದಿಂದ ಸಚಿವ ಸ್ಥಾನ ನೀಡುವುದಕ್ಕೂ ಸಿಎಂ ತಯಾರಿದ್ದರು. ಸಿದ್ದರಾಮಯ್ಯ ಬಳಿಯೂ ಎಚ್‌ಡಿಕೆ ಈ ವಿಚಾರವನ್ನು ಹೇಳಿಕೊಂಡರು. ಎಷ್ಟೇ ಮನವೊಲಿಸಿದರೂ ಜಾರಕಿಹೊಳಿ ಜಗ್ಗುತ್ತಿಲ್ಲವೆಂದು ಬೇಸರ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸದ್ಯಕ್ಕೆ ಅವರನ್ನು ಸುಮ್ಮನೇ ಬಿಟ್ಟು ಬಿಡುವುದು ಒಳ್ಳೆಯದು. ಅವರ ಸಮಸ್ಯೆ ಆಲಿಸುವ ಕೆಲಸ ಕಾಂಗ್ರೆಸ್‌ನಿಂದಲೂ ಆಗಿದೆ. ಆದರೆ, ರಮೇಶ್‌ ಜಾರಕಿಹೊಳಿ ಪಟ್ಟು ಬಿಡುತ್ತಿಲ್ಲ. ಈಗ ಅವರು ಬಿಜೆಪಿಗೆ ಹೋಗುವ ಸ್ಥಿತಿಯಲ್ಲೂ ಇಲ್ಲ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡವೆಂದು ಸಿಎಂ ಅವರಿಗೆ ಸಿದ್ದು ಧೈರ್ಯ ತುಂಬಿದ್ದಾರೆ ಎಂದು ತಿಳಿದು ಬಂದಿದೆ.
ಕೃಪೆ:ವಿಜಯಕರ್ನಾಟಕ

ಪಕ್ಷೇತರರಿಗೆ ಮಂತ್ರಿ ಸ್ಥಾನ ಪಕ್ಕಾ, ಕೈ ಶಾಸಕರ ಅಪಸ್ವರ
minister post for independents congress mlas fumes