ಯಾದಗಿರಿ,ಜೂ,22,2019(www.justkannada.in): ಕಲ್ಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಹೇರೂರು ( ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಸಿಎಂ ಗ್ರಾಮ ವಾಸ್ತವ್ಯ ಮಳೆಯಿಂದ ಮೂಂದೂಡಿಕೆಯಾಗಿದ್ದು, ಅನಾನುಕೂಲವಾಗಿರುವುದಕ್ಕೆ ಸಾರ್ವಜನಿಕರ ಕ್ಷಮೆಯಾಚಿಸುತ್ತೇನೆ ಮುಂದಿನ ಗ್ರಾಮವಾಸ್ತವ್ಯ ಎಲ್ಲಿ ಎನ್ನುವುದರ ಕುರಿತು ಜುಲೈ ತಿಂಗಳ ಮೊದಲ ವಾರದಲ್ಲಿ ನಿರ್ಧರಿಸಲಾಗುವುದು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಸಬೇಕಾಗಿದ್ದ ಜಿಲ್ಲೆಯ 28 ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿತ್ತು. ಇಂದು ನಡೆಯಬೇಕಾಗಿದ್ದ ಸಿಎಂ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯದಲ್ಲಿ ಬಹುತೇಕ ಬೇಡಿಕೆಗಳು ಈಡೇರಿಸುವ ನಿರೀಕ್ಷೆ ಮಾಡಲಾಗಿತ್ತು. ಅದರೆ, ಭಾರೀ ಮಳೆ ಬಿದ್ದ ಪರಿಣಾಮ ಹೇರೂರು ( ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಗ್ರಾಮವಾಸ್ತವ್ಯ ಮುಂದೂಡಿದೆ. ಆದರೂ ಮಳೆ ಬಂದಿರುವುದು ಹರ್ಷ ತರುವ ವಿಚಾರವಾಗಿದ್ದು ರೈತರು ಮುಂಗಾರು ಸಾಲಿನ ಕೃಷಿಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಹಾಗೆಯೇ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹೇರೂರು(ಬಿ) ಗ್ರಾಮದಲ್ಲಿ ಅಭಿವೃದ್ದಿ ಕಾಮಕಾರಿ ಕೈಗೊಳ್ಳಲು ಈಗಾಗಲೇ ರೂ.1.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಡಬೇಕಾಗಿರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಿಎಂ ಬಂದು ಮಾಡಬೇಕಾಗಿದೆ ಇದು ಆಡಳಿದ ವೈಫಲ್ಯವಲ್ಲವೇ? ಎನ್ನುವ ಪ್ರಶ್ನೆ ಉತ್ತರಿಸಿದ ಸಚಿವರು, ಕೆಲವೊಂದು ಸಂದರ್ಭಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಜೊತೆಗೆ ಸಮಗ್ರ ಅಭಿವೃದ್ದಿಗೆ ಸಾರ್ವಜನಿಕರ ಸಹಕಾರ ಹಾಗೂ ಬೆಂಬಲವೂ ಕೂಡಾ ಬೇಕು ಎಂದು ತಿಳಿಸಿದರು.
ಮೈತ್ರಿಸರಕಾರದಲ್ಲಿ ಒಮ್ಮತವಿಲ್ಲ ಅದು ನಿನ್ನೆ ನಡೆದ ಚಂಡ್ರಕಿ ಗ್ರಾಮದ ಸಿಎಂ ಅವರ ಸಭೆಯಲ್ಲಿ ಕಂಡುಬಂದಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರೋಟೋಕಾಲ್ ಪ್ರಕಾರ ನಡೆಸಬೇಕಿದ್ದ ಸಭೆಯಲ್ಲಿ ಶಾಸಕರ ಪುತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಚಿಸುವುದಿಲ್ಲ ಎಂದರು.
371 ( ಜೆ ) ಅನುಷ್ಠಾನ ಸಮಿತಿ ಉಪಸಮಿತಿ ಅಧ್ಯಕ್ಷನಾಗಿ ನಾನು ಜಿಲ್ಲೆಯಲ್ಲಿ ಈಗಾಗಲೇ ಖಾಲಿ ಇರುವ ಪ್ರಮುಖ 70 ಕ್ಕೂ ಅಧಿಕ ಹುದ್ದೆಗಳನ್ನು ಕೂಡಲೇ ತುಂಬಬೇಕು ಜೊತೆಗೆ ಹೈಕ ಭಾಗಕ್ಕೆ ವರ್ಗಾವಣೆಯಾದ ಅಧಿಕಾರಿಗಳು ಕಡ್ಡಾಯವಾಗಿ ಇಂತಿಷ್ಟು ವರ್ಷ ಕಾಲ ಕಾರ್ಯನಿರ್ವಹಿಸುವ ಕಾನೂನು ಜಾರಿಗೆ ತರುವಂತೆ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ಯಾವುದೇ ಕಾರಣಕ್ಕೆ 371 ( J) ಅಡಿಯಲ್ಲಿ ಒದಗಿಸಲಾಗಿರುವ ಸೌಲಭ್ಯದ ದುರುಪಯೋಗವಾಗಲು ಬಿಡುವುದಿಲ್ಲ ಕೆಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗೋಷ್ಠಿಯ ಮಧ್ಯೆ ಬಂದ ಸಿಎಂ ಅವರ ಕರೆಗೆ ಉತ್ತರಿಸಿದ ಬಂದ ಅವರು ಹೇರೂರು ( ಬಿ) ಗ್ರಾಮ ಸೇರಿದಂತೆ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು ಎಂದು ಹೇಳಿದರು. ಕಳೆದ ನಾಲ್ಕು ವರ್ಷದಲ್ಲಿ ಸಮಾಜಕಲ್ಯಾಣ ಇಲಾಖೆಯಲ್ಲಿ ನಿಗದಿಪಡಿಸಿದ ಅನುದಾನದಲ್ಲಿ ಶೇ.90 ಅನುದಾನ ಬಳಕೆಯಾಗಿದೆ. ಸಿಎಂ ಅವರ ಗ್ರಾಮವಾಸ್ತವ್ಯ ಮಾಡಬೇಕಿದ್ದ ಹೇರೂರು ( ಬಿ ) ಗ್ರಾಮದ ಅಭಿವೃದ್ದಿಗಾಗಿ ಇಲಾಖೆಯ ವತಿಯಿಂದ ಈಗಾಗಲೇ ರೂ 1.50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಮಹಾರಾಷ್ಟ್ರದಿಂದ ನೀರು ಬಿಡುವ ಒಪ್ಪಂದವಾಗಿದ್ದರೂ ಕೂಡಾ ಅಲ್ಲಿನ ಸರಕಾರ ನೀರು ಬಿಡಲು ನಕಾರ ತೋರಿಸಿದ್ದು, ಈಗಾಗಲೇ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಪತ್ರ ಬರೆದಿದ್ದು ಆ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ. ಪಾಟೀಲ್, ಅಜಯಸಿಂಗ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಮತ್ತಿತರಿದ್ದರು.
key words: Minister- Priyank Kharge- apologizes –postponing-gramvastavya