ಬೆಂಗಳೂರು ,ಏಪ್ರಿಲ್,12,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧೆಗಿಳಿದಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜಕಾರಣ ಫುಟ್ಬಾಲ್ ಅಲ್ಲ, ಚೆಸ್ ಗೇಮ್. ಚೆಸ್ ಆಡ್ತಿದ್ದಾರೆ ಆಡಲಿ, ನನಗೆ ಹೋರಾಟ ಹೊಸದೇನು ಅಲ್ಲ. ಇಡೀ ಜೀವನ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್. ಸಾಮ್ರಾಟನಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕನಕಪುರದಲ್ಲಿ ಆರ್.ಅಶೋಕ್ಗೆ ಒಳ್ಳೆಯ ಆತಿಥ್ಯ ಕೊಡೋಣ. ಕನಕಪುರದಲ್ಲಿ ಮಿಲಿಟರಿ ಹೋಟೆಲ್ಗಳು ಬಹಳಷ್ಟಿವೆ. ಒಳ್ಳೆಯ ಊಟ ಹಾಕಿಸಿ ಆತಿಥ್ಯ ಕೊಟ್ಟು ಕಳಿಸೋಣ ಎಂದು ಸಚಿವ ಆರ್.ಅಶೋಕ್ ಗೆ ಟಾಂಗ್ ನೀಡಿದರು.
ಪದ್ಮನಾಭನಗರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಬೇಕು ಎಂಬ ಒತ್ತಡವಿದೆ. ಆದ್ರೆ ಪದ್ಮನಾಭನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ರಘುನಾಥ ನಾಯ್ಡು ಸ್ಪರ್ಧಿಸ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಇಲ್ಲ. ಈ ಬಾರಿ ಪದ್ಮನಾಭನಗರ ಕ್ಷೇತ್ರದಲ್ಲೂ ಆರ್. ಅಶೋಕ್ ಸೋಲನುಭವಿಸುತ್ತಾರೆ ಎಂದು ಭವಿಷ್ಯ ನುಡಿದರು.
ಹಾಗೆಯೇ ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಆಶ್ಚರ್ಯಕರ ಹೆಸರು ಬರಲಿದೆ. ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಬಿರುಗಾಳಿ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಂದಿನಿಂದ ಹೊಸಗಾಳಿ ಪ್ರಾರಂಭವಾಗಿದೆ. ಬಿಜೆಪಿ ಪಟ್ಟಿ ಬಗ್ಗೆ ನಾನು ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಇನ್ನಷ್ಟು ಬದಲಾವಣೆ ಆಗಲಿದೆ ನೋಡುತ್ತಿರಿ ಎಂದರು.
Key words: minister-R.Ashok –contest-Kanakapur – DK Shivakumar