ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೊಳಪಟ್ಟು ಶೀಘ್ರ ಚೇತರಿಕೆಯ ಬಗ್ಗೆ ಅನುಭವ ಹಂಚಿಕೊಂಡ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಫೆಬ್ರವರಿ,6,2025 (www.justkannada.in):  ರೋಬೋಟ್‌ ನೆರವಿನಿಂದ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ನನ್ನ ಶೀಘ್ರಚೇತರಿಕೆಗೆ ಹೆಚ್ಚು ಸಹಕಾರಿಯಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಒಳಪಟ್ಟು, ಚೇತರಿಸಿಕೊಂಡವರ ಬೆಂಬಲಕ್ಕಾಗಿ ಆಯೋಜಿಸಿದ್ದ “ಸ್ಟ್ರೈಡ್‌ ಸಪೋರ್ಟ್‌ ಗ್ರೂಪ್‌” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲವು ಸಮಯದಿಂದ ಮೊಣಕಾಲಿನ ನೋವು ಕಾಡಲಾರಂಭಿಸಿತು, ಮೆಟ್ಟಿಲು ಸಹ ಹತ್ತಲು ಸಾಧ್ಯವಾಗುತ್ತಿರಲಿಲ್ಲ, ಹಲವಾರು ಜನ ಹಲವು ರೀತಿಯ ಸಲಹೆ ನೀಡಿದರು.  ಮಂಡಿನೋವಿಗೆ ತೈಲವನ್ನೂ ಸಹ ಹಚ್ಚಿಬಿಟ್ಟೆ, ಆದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ನಂತರ ಸ್ನೇಹಿತರ ಸಲಹೆಯಂತೆ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಡಾ.ನಾರಾಯಣ್ ಹುಲ್ಸೆ ಅವರನ್ನು ಭೇಟಿ ಮಾಡಿ, ತಪಾಸಣೆಗೆ ಒಳಗಾದಾಗ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಿದರು. ಪ್ರಾರಂಭದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಹಿಂಜರಿಕೆ ಇತ್ತು, ಆದರೆ, ರೋಬೋಟ್‌ ನೆರವಿನಿಂದ ನಿಖರವಾಗಿ ಹಾಗೂ ಅತಿವೇಗವಾಗಿ ಚೇತರಿಕೆ ಕಾಣಬಹುದು ಎಂಬುದರ ಬಗ್ಗೆ ವೈದ್ಯರ ಭರವಸೆ ನೀಡಿದ ಬಳಿಕ ತೆರೆದ ಶಸ್ತ್ರಚಿಕಿತ್ಸೆ ಬದಲು ರೋಬೋಟ್‌ ನೆರವಿನ ಶಸ್ತ್ರಚಿಕಿತ್ಸೆ ಆಯ್ದುಕೊಂಡೆ. ಅಂತೆಯೇ ಶಸ್ತ್ರಚಿಕಿತ್ಸೆ ಬಳಿಕ ನನ್ನ ನಿರೀಕ್ಷೆಗೂ ಮೀರಿ ಶೀಘ್ರವಾಗಿ ಚೇತರಿಕೆ ಕಂಡಿದ್ದೇನೆ ಎಂದರು.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಡಾ.ವಿ.ವಿ. ಚಿನಿವಾಲರ್‌ ಮಾತನಾಡಿ, ನಾನೂ ಸಹ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು, ಚೇತರಿಕೆ ಕಂಡಿದ್ದೇನೆ, ವೈದ್ಯಕೀಯ ಲೋಕದಲ್ಲಿ ರೋಬೋಟ್‌ನ ಆಗಮನ ರೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಡಾ.ನಾರಾಯಣ್ ಹುಲ್ಸೆ ಉಪಸ್ಥಿತರಿದ್ದರು.

Key words: Minister, Ramalinga Reddy, knee replacement, surgery