ರಾಜ್ಯದ ವಿವಿಧ ಧಾರ್ಮಿಕ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ -ಸಚಿವ ರಾಮಲಿಂಗ ರೆಡ್ಡಿ

ಮೈಸೂರು ಫೆಬ್ರವರಿ, 21,2025 (www.justkannada.in): ಪದವಿ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಇಂತಹ ಘಟಿಕೋತ್ಸವ ಸಮಾರಂಭ ಏರ್ಪಡಿಸಿ ಪ್ರಮಾಣ ಪತ್ರವನ್ನು ವಿತರಿಸುವುದು ಅತ್ಯಗತ್ಯ. ಇದರಿಂದ ಅವರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ. ರಾಜ್ಯದ ವಿವಿಧ ಧಾರ್ಮಿಕ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ಮುಜರಾಯಿ ಹಾಗೂ ಸಾರಿಗೆ  ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದರು.

ಇಂದು ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಆಗಮ ಘಟಿಕೋತ್ಸವ -2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಧಾರ್ಮಿಕ ಪರಿಷತ್ ನ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮಾಡುತ್ತೇವೆ. ಆಗಮ ಘಟಿಕೋತ್ಸವ ಸುಮಾರು 18 ವರ್ಷಗಳಿಂದ ಆಗಿಲ್ಲ ಎಂದು ಚರ್ಚೆ ಆಯಿತು. 2007 ರಿಂದ ಪದವಿ ಪಡೆದಿರುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲು ತಿಳಿಸಿದ್ದೆ ಆದರೆ ಎಲ್ಲರನ್ನೂ ಸಂಪರ್ಕಿಸಲು ಸಮಯಾವಕಾಶ ಕೊರತೆಯಿಂದ ಆಗಲಿಲ್ಲ. ಮುಂದಿನ 3 ತಿಂಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಅವರೆಲ್ಲರಿಗೂ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅರ್ಚಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದೇಶ ಪ್ರವಾಸಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನಗಳಲ್ಲಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಅವಕಾಶ ಕಲ್ಪಿಸಲಾಗಿದೆ. 1200 ಜನ ಅರ್ಚಕರಿಗೆ ದೇಶ ವಿವಿಧ ಭಾಗದ ಪುಣ್ಯ ಸ್ಥಳಗಳಿಗೆ ಭೇಟಿ ನೀಡಲು ಉಚಿತ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಗಳ ಒತ್ತುವರಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಎಕರೆ ಪ್ರದೇಶವನ್ನು ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಪೂರ್ಣ ಸರ್ವೇ ಆದರೆ ಇನ್ನೂ ಸಾವಿರಾರು ಎಕರೆ ಮುಜರಾಯಿ ಇಲಾಖೆಗೆ ಬರುತ್ತದೆ ಎಂದರು.

ಶ್ರೀ ಯದಗಿರಿ ಯತಿರಾಜ ನಾರಾಯಣ ಜೀಯರ್ ಸ್ವಾಮಿಗಳು ಅವರು ಮಾತನಾಡಿ ಧಾರ್ಮಿಕ ದತ್ತಿ ಇಲಾಖೆ ನಮ್ಮ ರಾಜ್ಯದ ಆತ್ಮ ಸ್ವರೂಪವಾದದ್ದು. ರಾಮಾನುಜಚಾರ್ಯರು ಕರ್ನಾಟಕಕ್ಕೆ ಬಂದು ಸುಮಾರು 22 ಸಾವಿರ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿದರು. ಧಾರ್ಮಿಕ ದತ್ತಿ ಇಲಾಖೆಯಿಂದ ಹಲವು ಅಭಿವೃದ್ದಿ ಆಗುತ್ತಿದೆ. ಅರ್ಚಕರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದೆ. ಮೈಸೂರು ಸಾಂಸ್ಕೃತಿಕ ನಗರಿ. ನಾನು ಮೈಸೂರಿನ ಮಹಾರಾಜ ಸಂಸ್ಕೃತ ಶಾಲೆಯ ಹಳೆಯ ವಿದ್ಯಾರ್ಥಿ. ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ಎಲ್ಲರಿಗೂ ಅಭಿನಂದನೆಗಳನ್ನು ಹಾರೈಸಿದರು.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಡಾ. ವೆಂಕಟೇಶ್ ಎಂ ವಿ ಅವರು ಮಾತನಾಡಿ 2007 ರಲ್ಲಿ ಆಗಮ ಘಟಿಕೋತ್ಸವ ನಡೆದಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ನಡೆದಿರಲಿಲ್ಲ. 17 ವರ್ಷಗಳ ನಂತರ ನಡೆಯುತ್ತಿದೆ.  2019 ರ ನಂತರ ಅಧ್ಯಯನ ಮಾಡಿದ ಸುಮಾರು 2000 ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಇಂದು ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ಇನ್ನುಳಿದ 10 ಸಾವಿರ ವಿದ್ಯಾರ್ಥಿಗಳಿಗೆ ಮುಂದಿನ ಮೂರು ನಾಲ್ಕು ತಿಂಗಳುಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಾಡೋಜ ಡಾ. ಪ್ರೊ. ಭಾಷ್ಯಂ ಸ್ವಾಮೀಜಿ ಅವರು ಮಾತನಾಡಿ, ಆಗಮಶಾಸ್ತ್ರವೆಂಬುದು ಅತ್ಯಂತ ವಿಪುಲವೂ, ಗಾಢವೂ, ವಿಶಾಲವೂ ಆಗಿರುತ್ತದೆ. ಆಧುನಿಕ ವಿಜ್ಞಾನ ಯುಗಕ್ಕೆ ಹತ್ತಾರು ವಿಷಯಗಳಲ್ಲಿ ಆಗಮ ಶಾಸ್ತ್ರವು ತನ್ನ ಕೊಡುಗೆಯನ್ನು ನೀಡಲು ಸಮರ್ಥವಾಗಿದೆ. ಈಗ, ಆಗಮ ಶಾಸ್ತ್ರಗಳಲ್ಲಿ ಹೇಳಿರುವ ವಿಷಯವನ್ನು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆಗಳ ಮೂಲಕ ಸಂಶೋಧಿಸಿ ಅದರ ಸತ್ಯಾಂಶಗಳನ್ನು ಜಗತ್ತಿಗೆ ಸಾರ ಬೇಕಾದಂತಹ ಒಂದು ಕಾಲ ಒದಗಿಬಂದಿದೆ. ಇದರ ಜೊತೆಗೆ ಆಗಮ ಶಾಸ್ತ್ರಕ್ಕೆ ಸೇರಿದ ಅಪ್ರಕಟಿತವಾದ  ತಾಳೆ ಗರಿಗಳ ರೂಪದಲ್ಲಿ ಗ್ರಂಥಗಳನ್ನು ಉದ್ಧರಿಸಿ ಸಂಪಾದಿಸಿ ಭಾಷಾಂತರಿಸಿ ಪ್ರಕಟಪಡಿಸುವ ಒಂದು ಮಹತ್ಕಾರ್ಯವೂ ಸಹ ಆಗಬೇಕಾಗಿದೆ. ಈ ಎಲ್ಲಾ ಕಾರ್ಯಗಳು ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನಮ್ಮ ಕರ್ನಾಟಕ ಸರ್ಕಾರವು ‘ಆಗಮ ಸಂಶೋಧನ ಸಂಸತ್’ ಎಂಬ ಆಗಮಶಾಸ್ತ್ರದ ಸಂಶೋಧನೆಗೇ ಮೀಸಲಾದ ಒಂದು ಸಂಶೋಧನ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಈ ಕೆಲಸಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ ಹಾಗೂ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಕಾರ್ಯ ಪ್ರವೃತ್ತವಾಗಬೇಕು ಎಂದು ಕೋರಿದರು.

ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸುವ ಅರ್ಚಕರು ಕೇವಲ ಅರ್ಚಕರಾಗಿ ಮಾತ್ರ ಇರುವುದಿಲ್ಲ, ಅವಶ್ಯಕವಾದ ಜ್ಞಾನವನ್ನು ಅರ್ಚಕರು ಪಡೆದಿರಬೇಕಾಗುತ್ತದೆ. ತಿಳಿಯಬೇಕಾದ ಅಂಶವನ್ನು ತಿಳಿದುಕೊಳ್ಳದೇ ಸಾರ್ವಜನಕರಿಗೆ ಸಲಹೆ ಸೂಚನೆಗಳನ್ನು ಅರ್ಚಕರು ನೀಡಿದರೆ ಅದು ಸಮಾಜಕ್ಕೆ ಮಾಡುವ ವಂಚನೆಯಾಗುತ್ತದೆ. ಆದ್ದರಿಂದ ಅರ್ಚಕರು ಸಂಸ್ಕೃತ ಭಾಷೆ, ವೇದಮಂತ್ರಗಳು, ರಾಮಾಯಣ ಮುಂತಾದವುಗಳ ಪ್ರಾರಂಭಿಕ ಪರಿಚಯ, ಜ್ಯೋತಿಷ ಮುಂತಾದ ಶಾಸ್ತ್ರಗಳ ಯಥೋಚಿತ ಜ್ಞಾನ ಇವುಗಳೆಲ್ಲವನ್ನೂ ಪಡೆದಿರಬೇಕಾಗುತ್ತದೆ. ಇದರ ಜೊತೆಗೆ ಅರ್ಚಕರು ತಮ್ಮಲ್ಲಿ ಸತ್ಯಪರತೆ, ಅನುಕಂಪ, ದಯೆ, ಸೌಜನ್ಯ, ಶೀಲವಂತಿಕೆ ಮುಂತಾದ ಸದ್ಗುಣಗಳನ್ನು ಅಳವಡಿಸಿ ಕೊಳ್ಳಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ಅರ್ಚಕರು ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಆಗಮಶಾಸ್ತ್ರ ಎಂಬುದು ಜ್ಞಾನಪಾದ, ಕ್ರಿಯಾಪಾದ, ಯೋಗಪಾದ ಮತ್ತು ಚರ್ಯಪಾದಗಳೆಂಬ ನಾಲ್ಕು ಅಂಶಗಳನ್ನು ಹೊಂದಿದೆ. ಇಂದು ಆಗಮಗಳ ಯಥಾವತ್ತಾದ ಜ್ಞಾನವು ಬಹಳ ಮಟ್ಟಿಗೆ ಕ್ಷೀಣಿಸಿದೆ. ಆದ್ದರಿಂದ ಕ್ರಿಯಾಪಾದ ಮತ್ತು ಚರ್ಯಾಪಾದಗಳ ಕೆಲ ಅಂಶಗಳನ್ನು ಮಾತ್ರ ಅನುಸರಿಸಿ ಪೂಜಾ ವಿಧಿವಿಧಾನಗಳು ದೇವಸ್ಥಾನದಲ್ಲಿ ನಡೆಯುತ್ತದೆ. ಬಹುಶಃ ಜ್ಞಾನಪಾದ ಮತ್ತು ಯೋಗ ಪಾದಗಳೆಂಬ ಎರಡು ಪ್ರಧಾನ ಅಂಗಗಳನ್ನು ಆಗಮ ಗ್ರಂಥಗಳಲ್ಲಿ ಹೇಳಿರುವುದೇ ಅನೇಕರಿಗೆ ತಿಳಿಯದ ವಿಷಯವಾಗಿದೆ. ಇದರಿಂದಲೂ ಸಹ ಆಗಮ ಶಾಸ್ತ್ರದ ಸ್ಥಿತಿಗತಿಗಳು ಬಹಳ ಕೆಳಮಟ್ಟಕ್ಕೆ ಇಳಿದಿರುವುದು ಬಹಳ ದುಃಖಕರವಾದ ಸಂಗತಿಯಾಗಿದೆ ಎಂದರು.

ಆದರ್ಶ ಅರ್ಚಕರಾಗಿರುವವರು ಲೋಹಶಾಸ್ತ್ರ, ತಂತ್ರಶಾಸ್ತ್ರ, ಶಿಲ್ಪಶಾಸ್ತ್ರ, ಮುಂತಾದ ವಿಷಯಗಳಲ್ಲಿಯೂ ಸಹ ನಿಪುಣರಾಗಿರಬೇಕಾಗುತ್ತದೆ. ಪ್ರತಿ ದಿವಸವೂ ಪೂಜೆಯನ್ನು ಮಾಡುವ ಮೊದಲು ‘ಭೂತಶುದ್ಧಿ’ ಯೆಂಬ ಕ್ರಮವನ್ನು ಅನುಸರಿಸಿ ತನ್ನ ಪಾಂಚ ಭೌತಿಕವಾದ ಶರೀರವನ್ನು ಲಯಗೊಳಿಸಿ ಮತ್ತೆ ದಿವ್ಯ ಶರೀರವನ್ನು ಪಡೆದು ಅನಂತರದಲ್ಲಿ ಪೂಜೆಯನ್ನು ನಿರ್ವಹಿಸುವುದು ಆಗಮ ಶಾಸ್ಮಿಕ್ತವಾದ ಕ್ರಮ. ಈ ಎಲ್ಲ ಶಾಸ್ತ್ರೀಯವಾದ ವಿಷಯಗಳನ್ನು ಅರಿತು ಅರ್ಚಕರಾದವರು ಪೂಜೆಯನ್ನು ನಿರ್ವಹಿಸಬೇಕಾಗುತ್ತದೆ. ಹಾಗೆ ಮಾಡಿದಾಗ ಮಾತ್ರ ದೇವಸ್ಥಾನದಲ್ಲಿ ದೇವರ ಸಾನ್ನಿಧ್ಯವು ಎಲ್ಲರಿಗೂ ತಿಳಿಯುವಂತಾಗಿ ದೇವರ ಕೃಪೆಯು ಎಲ್ಲ ಜನರ ಮೇಲೆ ಹರಿಯುವಂತಾಗುವುದು ಎಂದು ಸಲಹೆ ಮಾಡಿದರು.

ಕರ್ನಾಟಕದಲ್ಲಿ ಇದುವರೆವಿಗೂ ಎಲ್ಲಾ ಆಗಮಗಳ ಅಧ್ಯಯನ-ಅಧ್ಯಾಪನವೂ ಅನವರತವಾಗಿ ನಡೆದುಕೊಂಡು ಬಂದಿರುತ್ತದೆ. ಇದಕ್ಕೆ ಕಾರಣ ಈ ವಿಷಯದಲ್ಲಿ ಮೈಸೂರಿನ ರಾಜಮನೆತದವರು ತೋರಿದ ಒಲವು. ಮೈಸೂರು ವಿಶ್ವವಿದ್ಯಾಲಯವು ಆರಂಭವಾಗುವುದಕ್ಕೆ ಸುಮಾರು 50 ವರ್ಷಗಳ ಹಿಂದೆಯೇ ಮಹಾರಾಜರು “ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆ” ಯನ್ನು ಸ್ಥಾಪಿಸಿ ಒಂದೇ ಸೂರಿನಡಿಯಲ್ಲಿ ವೇದ-ಶಾಸ್ತ್ರ-ಆಗಮ ಇವೆಲ್ಲವುಗಳನ್ನು ಬೋಧಿಸಲು ವಿಶೇಷ ಪ್ರೋತ್ಸಾಹವನ್ನು ನೀಡಿ ಅನುವು ಮಾಡಿಕೊಟ್ಟರು. ಇದನ್ನು ಸ್ವಾತಂತ್ರಾನಂತರ ಕರ್ನಾಟಕ ಘನ ಸರ್ಕಾರವು ಮುಂದುವರಿಸಿಕೊಂಡು ಬಂದಿರುವುದು ಬಹಳ ಸಂತೋಷದ ವಿಷಯ. ಅನೇಕ ವರ್ಷಗಳಿಂದ ನಿಂತು ಹೋಗಿದಂತಹ ಈ ಘಟಿಕೋತ್ಸವವನ್ನು ಮತ್ತೆ ಪ್ರಾರಂಭಿಸಿರುವುದು ಬಹಳ ಸೂಕ್ತ ಮತ್ತು ಸಂವಿಧಾನಕ್ಕೆ ಅನುಗುಣವಾಗಿರುತ್ತದೆ. ಇದನ್ನು ಇನ್ನು ಮುಂದೆ ಪ್ರತಿವರ್ಷವೂ ಸಹ ನಡೆಸಿಕೊಂಡು ಹೋಗುವುದು ಅತ್ಯವಶ್ಯಕವಾಗಿದೆ ಎಂದು ಬಯಸಿದರು.

ಆಗಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು. ವಿಧ್ಯಾರ್ಥಿಗಳಿಗೆ ಪ್ರಮಾಣ ವಚನ ಬೋದಿಸಲಾಯಿತು. ಆಗಮ ವಿದ್ವಾಂಸರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣ ರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ವಿದ್ವಾಂಸರು ಹಾಗೂ ಪದವಿ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: development, various,  religious temples, Minister, Ramalinga Reddy