• ಸಚಿವ ಸೋಮಶೇಖರ್ ಅವರ ಒಂದೇ ಕರೆಗೆ ವ್ಯಾಪಕ ಸ್ಪಂದನೆ
• ದಾನಿಗಳಿಂದ 73.16 ಲಕ್ಷ ರೂ. ದೇಣಿಗೆ ಸಂಗ್ರಹ
• ಪ್ರಾಣಿ-ಪಕ್ಷಿಗಳ ಪ್ರೀತಿ ಮೆರೆದ ಸಚಿವರು
ಮೈಸೂರು: ಒಬ್ಬ ಸಚಿವರಾದವರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತೋರಿಸಿಕೊಟ್ಟಿದ್ದಾರೆ. ಮೊದಲು ರಾಜಕೀಯ ಪಟುಗಳಿಗೆ ಇಚ್ಛಾಶಕ್ತಿ ಇರಬೇಕಷ್ಟೆ ಎಂಬುದು ಮುಖ್ಯವಾಗುತ್ತದೆ. ಈಗ ಆ ಇಚ್ಛಾಶಕ್ತಿಯ ಪರಿಣಾಮವೇ ಮೈಸೂರು ಮೃಗಾಲಯಕ್ಕೆ ಹೊಸ ದಿಕ್ಕನ್ನು ನೀಡಲು ಹೊರಟಿದೆ. ಇದೀಗ ಪ್ರಾಣಿಸಂಗ್ರಹಾಲಯಕ್ಕೆ 73.16 ಲಕ್ಷ ಆರ್ಥಿಕ ನೆರವು ಹರಿದುಬಂದಿದೆ.
ಹೌದು. ಕೊರೋನಾ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಬಿಸಿ ಮೃಗಾಲಯಗಳಿಗೂ ತಟ್ಟಿದೆ. ಯಾರೂ ಎಲ್ಲಿಯೂ ಸಂಚರಿಸದಿರುವುದರಿಂದ ಪ್ರವಾಸಿಗರ ಆಗಮನ ಶೂನ್ಯಕ್ಕೆ ಇಳಿದಿದೆ. ಒಂದು ವೇಳೆ ಪ್ರವಾಸಿಗರು ಆಗಮಿಸುತ್ತಿದ್ದರೆ ಪ್ರವೇಶ ಶುಲ್ಕದಿಂದ ಸಂಗ್ರಹವಾಗುತ್ತಿದ್ದ ಹಣದಿಂದ ಅಲ್ಪ ಮಟ್ಟಿಗೆ ಸಹಾಯವಾಗುತ್ತಿತ್ತು. ಈಗ ಅದೂ ಇಲ್ಲವಾಗಿದೆ.
ಈ ವಿಷಯ ಏ.ಪ್ರಿಲ್ 22 ರಂದು ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಸಚಿವರು ಭೇಟಿ ಕೊಟ್ಟಾಗ ಗಮನಕ್ಕೆ ಬಂದಿತ್ತು. ಆಗಲೇ ಅಲ್ಲಿನ ಪರಿಸ್ಥಿತಿಯನ್ನು ಮನಗಂಡ ಸಚಿವರು ತಕ್ಷಣ 1.75 ಲಕ್ಷ ರೂಪಾಯಿ ಹಣವನ್ನು ವೈಯಕ್ತಿಕವಾಗಿ ನೆರವನ್ನು ನೀಡುವ ಮೂಲಕ 5 ವರ್ಷದ ಚಾಮುಂಡಿ ಎಂಬ ಹೆಣ್ಣಾನೆಯನ್ನು 1 ವರ್ಷದ ಅವಧಿಗೆ ದತ್ತುಪಡೆದರು. ಅಲ್ಲದೆ, ಅಲ್ಲಿರುವ 16 ಹುಲಿಗಳ ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂಪಾಯಿಯ ನೆರವನ್ನೂ ನೀಡಿ ಮಾನವೀಯತೆ ಮೆರೆದರು.
ಇಷ್ಟಕ್ಕೇ ಸುಮ್ಮನಾಗದ ಸಚಿವರು ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೈಸೂರು ಮೃಗಾಲಯಕ್ಕೆ ದಾನಿಗಳಿಂದ ದೇಣಿಗೆ ನೀಡುವಂತೆ ವೈಯಕ್ತಿಕವಾಗಿ ಮಾಡಿಕೊಂಡ ಒಂದು ಮನವಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಈಗ 73 ಲಕ್ಷ 16 ಸಾವಿರ ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಮೃಗಾಲಯಕ್ಕೆ ಸ್ವತಃ ಸಚಿವರು ಹಸ್ತಾಂತರ ಮಾಡಿದರು.
ಸರ್ಕಾರದ ಯೋಜನೆಗಳ ಜೊತೆಗೆ ಸಾರ್ವಜನಿಕರ ಸಹಕಾರವನ್ನು ಪಡೆದರೆ ಹೀಗೆಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಎಂಬುದನ್ನು ಈ ಮೂಲಕ ಸಚಿವ ಸೋಮಶೇಖರ್ ಅವರು ತೋರಿಸಿಕೊಟ್ಟಿದ್ದಾರೆ.