ಮೈಸೂರು, ಆಗಸ್ಟ್ 23, 2020 (www.justkannada.in): ಮುಷ್ಕರ ಹಿಂಪಡೆದ ವೈದ್ಯರ ನಿರ್ಧಾರಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ನಾಲ್ಕೈದು ತಿಂಗಳಿನಿಂದ ಕೋವಿಡ್ -19 ಮಹಾಮಾರಿ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಜಿಲ್ಲಾಡಳಿತ ಸೇರಿದಂತೆ ಅನೇಕ ಇಲಾಖೆಗಳ ತಂಡದವರು ಅವಿರತವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಇದು ಎಂದಿಗೂ ಸ್ಮರಣೀಯವಾಗಿದ್ದು, ಯಾರೂ ಎಂದೂ ಸಹ ಇದನ್ನು ಮರೆಯಲಾಗದು. ಇನ್ನು ಕೋವಿಡ್ ಸಂದರ್ಭದಲ್ಲಿ ವೈದ್ಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದರು.
ವೈದ್ಯರ ಎಲ್ಲ ಸಮಸ್ಯೆಗಳು ಸರ್ಕಾರದ ಅರಿವಿಗೆ ಬಂದಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಬೇಡಿಕೆಗಳನ್ನು ಈಡೇರಿಸಲು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಸ್ ಪಡೆದಿರುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಜೊತೆಗೆ ರಾಜ್ಯ ಮತ್ತು ಮೈಸೂರು ವೈದ್ಯಾಧಿಕಾರಿಗಳ ಸಂಘಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೀಗಾಗಿ ಕೋವಿಡ್ ಸನ್ನಿವೇಶದಲ್ಲಿ ಜನರ ಆರೈಕೆಗೆ ಮತ್ತೆ ಮುಂದಾಗುತ್ತಿರುವುದಕ್ಕೆ ಅಭಿನಂದನೆಯನ್ನು ತಿಳಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.