ಗದಗ,ಜೂ,20,2020(www.justkannada.in): ಕೊರೋನಾ ಇದ್ದ ಸಂದರ್ಭದಲ್ಲಿಯೂ ಜಿಲ್ಲಾಪ್ರವಾಸ ಮಾಡುತ್ತಾ ಅಲ್ಲಿ ರಚನಾತ್ಮಕ ಕೆಲಸ ಮಾಡುತ್ತಾ, ನಾಗರಿಕರನ್ನು ಪ್ರೋತ್ಸಾಹ ಮಾಡುತ್ತಿದ್ದಾರೆ. ಸಹಕಾರ ವಲಯವನ್ನು ಸಕ್ರಿಯವಾಗಿಟ್ಟಿದ್ದಾರೆ. ಸೋಮಶೇಖರ್ ಅಧಿಕಾರ ವಹಿಸಿಕೊಂಡ ಕೇವಲ ಮೂರು ತಿಂಗಳಿನಲ್ಲಿಯೇ ಸಹಕಾರ ಇಲಾಖೆಯ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಸಹಕಾರ ಸಚಿವರು ಹಾಗೂ ಶಾಸಕರಾದ ಎಚ್.ಕೆ.ಪಾಟೀಲ್ ಹೇಳಿದರು.
ಸಹಕಾರ ಇಲಾಖೆ ವತಿಯಿಂದ ಕೊರೋನಾ ವಾರಿಯರ್ಸ್ ಆಗಿರುವ ಆಶಾ ಕಾರ್ಯಕರ್ತೆಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮದ ಪಾಲ್ಗೊಂಡು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿದರು.
ಇದೇ ವೇಳೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರನ್ನ ಹೊಗಳಿದ ಹೆಚ್.ಕೆ ಪಾಟೀಲ್, ಸಹಕಾರಿ ಕ್ಷೇತ್ರದಲ್ಲಿ ಒಬ್ಬ ಮಂತ್ರಿ ಸಹಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಯಾವ ರೀತಿ ಕೆಲಸವನ್ನು ಮಾಡಬಹುದು ಎಂಬುದನ್ನು ಅತ್ಯಲ್ಪ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಎಲ್ಲ ಸಹಕಾರಿಗಳಿಗೆ ಈ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಹಕಾರ ಇಲಾಖೆಯ ವ್ಯಾಪ್ತಿಯೊಳಗೆ ಬರುವ ಲಾಭ ಗಳಿಸಿದ ಸಹಕಾರ ಸಂಸ್ಥೆಗಳು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಕೊಡಬೇಕು ಎಂದು ಆದೇಶ ನೀಡಿ ಸಹಕಾರ ಇಲಾಖೆಯಿಂದ ಹೀಗೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸಂಗ್ರಹವಾದ ದೇಣಿಗೆಯಲ್ಲೆ ಅತಿ ಹೆಚ್ಚು ಅಂದರೆ 52 ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆಯಿಂದ ಸಂಗ್ರಹಿಸಿ ಕೊಟ್ಟ ಖ್ಯಾತಿ ಸಚಿವರಾದ ಸೋಮಶೇಖರ್ ಅವರಿಗೆ ಸಲ್ಲುತ್ತದೆ. ಇದು ಅವರ ನಾಯಕತ್ವ ಗುಣವನ್ನು ತೋರಿಸುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಎಲ್ಲರೂ ಮನೆಯಲ್ಲಿ ಬಾಗಿಲು ಹಾಕಿ ಕುಳಿತ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ದಿಟ್ಟತನದಿಂದ ಮನೆ ಮನೆಗೆ ಹೋಗಿ ಸೇವೆ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ ಎಂದು ಎಚ್.ಕೆ.ಪಾಟೀಲರು ಹೇಳಿದರು.
ಸಹಕಾರ ಸಚಿವರಾದ ಸೋಮಶೇಖರ್ ಅವರಿಗೆ ಆಶಾ ಕಾರ್ಯಕರ್ತೆಯರ ಪತ್ತು ಹಾಗೂ ವಿವಿಧೋದ್ದೇಶಗಳ ಸಂಸ್ಥೆಯನ್ನು ಮಾಡಿ ಸಾಲ ಸಹಕಾರ ಕೊಡುವ ಚಿಂತನೆ ಇದ್ದು, ಗದಗ ಜಿಲ್ಲೆಯಿಂದಲೇ ಅದನ್ನು ಪ್ರಾರಂಭಿಸಬೇಕು. ಆಶಾ ಕಾರ್ಯಕರ್ತೆಯರ ಕೈ ಬಕಪಡಿಸಬೇಕು ಎಂದು ಎಚ್.ಕೆ.ಪಾಟೀಲ್ ಅವರು ಮನವಿ ಮಾಡಿದರು.
ಚೆಕ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು, ಆಶಾ ಕಾರ್ಯಕರ್ತೆಯರು ಸ್ವಾಭಿಮಾನಿಗಳಿದ್ದು, ಅವರಿಗೆ ಸಾಲ ಕೊಟ್ಟರೆ ನೂರಕ್ಕೆ ನೂರು ಮರುಪಾವತಿಯಾಗಲಿದೆ. ಹಾಗಾಗಿ ಅವರಿಗೆ ಸಹಕಾರ ವಲಯದಿಂದ ಶೂನ್ಯಬಡ್ಡಿ ದರದಲ್ಲಿ ಯಾವ ರೀತಿಯಾಗಿನ ಸಾಲ ಕೊಡಿಸಬಹುದು ಎಂಬುದನ್ನು ಜಾರಿಗೆ ತರುವ ಚಿಂತನೆ ಇದೆ. ಈ ಮೂಲಕ ಅವರನ್ನು ಆರ್ಥಿಕವಾಗಿ ಬಲಪಡಿಸುವ ಕಾರ್ಯಕ್ಕೆ ಕೈಹಾಕಲಾಗುವುದು ಎಂದು ತಿಳಿಸಿದರು.
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ರಾಮಣ್ಣ ಲಮಾಣಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇತರರು ಇದ್ದರು.
Key words: minister- ST Somasekhar – Department – Cooperation – three months-Former minister -H.K. Patil