ಬೆಂಗಳೂರು,ಜು,20,2020(www.justkannada.in): ರಾಜಧಾನಿ ಬೆಂಗಳೂರಿನಲ್ಲಿ ದಿನೇದಿನೆ ಕೋವಿಡ್-19 ಸೋಂಕು ಪ್ರಕರಣ ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಸಹಕಾರ ಸಚಿವರು ಹಾಗೂ ರಾಜರಾಜೇಶ್ವರಿ ವಲಯ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬೆಳಗ್ಗೆ ಕೋವಿಡ್ 19 ಝೋನಲ್ ಕಮಾಂಡರ್ ಸೆಂಟರ್ ಸೇರಿದಂತೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಲ್ಲದೆ, ಯಾವುದೇ ಕಾರಣಕ್ಕೆ ತಮಗೆ ನಿರ್ವಹಣೆ ಸಂಬಂಧ ದೂರುಗಳು ಬರಕೂಡದು ಎಂದು ತಾಕೀತು ಮಾಡಿದರು.
ಬೆಳಗ್ಗೆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿರುವ ಕೋವಿಡ್- 19 ಝೋನಲ್ ಕಮಾಂಡರ್ ಸೆಂಟರ್ ಗೆ ದಿಢೀರ್ ಭೇಟಿ ನೀಡಿದ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು, ಅಲ್ಲಿ ಯಾವ ರೀತಿ ನಿರ್ವಹಣೆ ಮಾಡಲಾಗುತ್ತಿದೆ? ಸರ್ಕಾರದಿಂದ ನಿಯೋಜನೆಗೊಂಡಿರುವ ತಹಸೀಲ್ದಾರ್ ಗಳು, ಎಸಿಗಳು ಹಾಗೂ ಸಿಬ್ಬಂದಿ ವರ್ಗ ಯಾವ ರೀತಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ? ಹಾಸಿಗೆ ಸೌಲಭ್ಯ ಸಮರ್ಪಕವಾಗಿದೆಯೇ? ಸೋಂಕು ಪತ್ತೆಯಾದವರ ಪ್ರಾಥಮಿಕ ಸಂಪರ್ಕಿತರಿಗೆ ಯಾವ ವ್ಯವಸ್ಥೆ ಮಾಡಲಾಗಿದೆ? ಎಂಬಿತ್ಯಾದಿ ಮಾಹಿತಿಗಳನ್ನು ಪಡೆದುಕೊಂಡರು.
ಝೋನಲ್ ಕಮಾಂಡರ್ ಸೆಂಟರ್ ಕೆಲಸ ಹೇಗೆ?
ಈ ಕೋವಿಡ್- 19 ಝೋನಲ್ ಕಮಾಂಡರ್ ಸೆಂಟರ್ ನಲ್ಲಿ ಸೋಂಕಿತರ ಬಗೆಗಿನ ಸಂಪೂರ್ಣ ವಿವರಗಳನ್ನು ಕಲೆ ಹಾಕಲಾಗುತ್ತದೆ. ಕೋವಿಡ್ 19 ಲಕ್ಷಣ ಬಂದವರು ಪರೀಕ್ಷೆ ಮಾಡಿಸಿಕೊಂಡ ಬಳಿಕ ಪಾಸಿಟಿವ್ ಎಂದು ವರದಿ ಬಂದ ಕೂಡಲೇ ಈ ಕೇಂದ್ರದ ಸಿಬ್ಬಂದಿ, ಆಂಬುಲೆನ್ಸ್, ಬಿಬಿಎಂಪಿ ಅಧಿಕಾರಿಗಳು, ಸೋಂಕಿತರ ಮನೆಯವರಿಗೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ವ್ಯವಸ್ಥೆ ಮಾಡುವಂತೆ ಮಾಹಿತಿಯನ್ನು ನೀಡುತ್ತಾರೆ. ಬಳಿಕ ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ ಮೇಲೂ ಆ ರೋಗಿಯ ಪ್ರತಿ ಹಂತಗಳ ಬಗ್ಗೆ ನಿರಂತರವಾಗಿ ವೈದ್ಯರು ಸಹಿತ ಹಲವರಿಂದ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಅಲ್ಲದೆ, ಅಲ್ಲಿನ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಜೊತೆಗೆ ಕಂಟೈನ್ಮೆಂಟ್ ಝೋನ್ ಗಳಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗುತ್ತಿದೆಯೇ ಎಂಬಿತ್ಯಾದಿ ವಿಷಯಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಅಧಿಕಾರಿಗಳಿಂದ ಸಚಿವ ಎಸ್.ಟಿ ಸೋಮಶೇಖರ್ ಪಡೆದು, ಅಗತ್ಯ ಸೂಚನೆಗಳನ್ನು ನೀಡಿದರು.
ಜ್ಞಾನಭಾರತಿ ಕ್ಯಾಂಪಸ್ ನ ನೂತನ 450 ಬೆಡ್ ಪರಿಶೀಲನೆ…
ಕೋವಿಡ್-19 ಸಂಬಂಧ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಹೊಸದಾಗಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾದ 450 ಹಾಸಿಗೆಯುಳ್ಳ ಕೋವಿಡ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಸಚಿವರಾದ ಸೋಮಶೇಖರ್ ಅವರು, ಖುದ್ದು ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಹಾಸಿಗೆ ವ್ಯವಸ್ಥೆಯನ್ನು ಯಾವ ರೀತಿ ನಿರ್ವಹಣೆ ಮಾಡಲಾಗಿದೆ. ಸೋಂಕಿತರನ್ನು ದಾಖಲು ಮಾಡಿದರೆ ಸೂಕ್ತ ವ್ಯವಸ್ಥೆಗಳು ಇವೆಯೇ? ಎಷ್ಟು ಮಂದಿ ಸಿಬ್ಬಂದಿಯನ್ನು ಇದಕ್ಕೋಸ್ಕರ ನಿಯೋಜನೆ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ? ಅದಕ್ಕಾಗಿ ಯಾವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು.
ಬಳಿಕ ಅಲ್ಲಿನ ಉಸ್ತುವಾರಿ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳ ಬಗ್ಗೆ ಚರ್ಚಿಸಿದ ಸಚಿವರು, ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಕೋವಿಡ್ 19 ಗೆ ಸಂಬಂಧಿಸಿದಂತೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಏನು ಸಮಸ್ಯೆಗಳು ಇವೆ ಎಂದು ಪ್ರಶ್ನಿಸಿದ್ದಲ್ಲದೆ, ಅವರಿಂದ ಮಾಹಿತಿಯನ್ನು ಪಡೆದುಕೊಂಡರು. ಮುಂದೆ ಇಂತಹ ದೂರುಗಳು ನನಗೆ ಬರಕೂಡದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಏನೇ ಸಮಸ್ಯೆಗಳಿದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಂಡರೆ ನೂರಕ್ಕೆ ನೂರರಷ್ಟು ಬಗೆಹರಿಸಿಕೊಡುತ್ತೇನೆ ಎಂದೂ ಸಚಿವರು ಅಭಯ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ
ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯರು ಹಾಗೂ ನರ್ಸ್ ಗಳ ಬಳಿ ಸಮಾಲೋಚನೆ ನಡೆಸಿದರು. ಚಿಕಿತ್ಸೆ ವೇಳೆ ಯಾವುದಾದರೂ ಸಮಸ್ಯೆಗಳು ಎದುರಾಗುತ್ತಿವೆಯೇ? ಸರ್ಕಾರದ ವತಿಯಿಂದ ಯಾವುದಾದರೂ ಸೌಲಭ್ಯ ಬೇಕಿದೆಯೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಖುದ್ದು ಆಲಿಸಿ, ಸಲಹೆ-ಸೂಚನೆಗಳನ್ನು ನೀಡಿದರು.
ಯಾವುದೇ ಅವ್ಯವಸ್ಥೆ ಇಲ್ಲ
ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಅವ್ಯವಸ್ಥೆ ಇಲ್ಲಿ ಇಲ್ಲ, ಹೊಸತಾಗಿ ವ್ಯವಸ್ಥೆ ಮಾಡಿಕೊಳ್ಳುವಾಗ ಸಣ್ಣಪುಟ್ಟ ಗೊಂದಲಗಳಾಗುವುದು ಸಹಜ. ನಮ್ಮ ವೈದ್ಯರು ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಜೊತೆಗೆ ನಾನೂ ಸಹ ದಿಢೀರ್ ಭೇಟಿ ಕೊಟ್ಟು ಎಲ್ಲ ಕಡೆ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳೊಂದಿಗೂ ಚರ್ಚೆ ನಡೆಸಿದ್ದು, ಯಾವುದೇ ತೊಂದರೆಗಳಿದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದ್ದೇನೆ. ಸಾರ್ವಜನಿಕರು ಸಹ ಭಯಗೊಳ್ಳುವುದು ಬೇಡ. ಸರ್ಕಾರ ನಿರಂತರವಾಗಿ ಅವರಿಗೋಸ್ಕರ ಕೆಲಸ ಮಾಡುತ್ತಿದೆ ಎಂದು ಸಚಿವರಾದ ಸೋಮಶೇಖರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ವೇಳೆ ರಾಜರಾಜೇಶ್ವರಿ ನಗರ ವಲಯದ ಜೆಸಿ ಜಗದೀಶ್, ಎಸಿ ಶಿವಣ್ಣ ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದರು.
Key words: minister- ST Somashekar- visit- Covid- 19 -Zonal Commander- Center