ಮೈಸೂರು, ನವೆಂಬರ್ 14, 2021 (www.justkannada.in): ಸಹಕಾರ ಸಚಿವರೂ ಆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಟಿ.ಸೋಮಶೇಖರ್ ಅವರು ಮಕ್ಕಳ ದಿನಾಚರಣೆ ಶುಭಸಂದೇಶ ನೀಡಿದ್ದಾರೆ.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳು ಈ ದೇಶದ ಆಸ್ತಿ. ದೇವರ ಸಮಾನದ ಸಮಸ್ತ ಮಕ್ಕಳಿಗೆ ಮಕ್ಕಳ ಜಯಂತಿಯ ಶುಭಾಶಯಗಳು. ಮಕ್ಕಳ ಬಗೆಗಿನ ಅತೀವ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದ ಭಾರತ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸವಿನೆನಪಿಗಾಗಿ ಆಚರಿಸುವ ಮಕ್ಕಳ ದಿನಾಚರಣೆಯಂದು ಸಮಸ್ತ ಮಕ್ಕಳಿಗೆ ಶುಭಾಶಯ ಕೋರುವುದರ ಜೊತೆಗೆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಉತ್ತಮ ಶಿಕ್ಷಣ, ಆರೋಗ್ಯ, ಆಹಾರ ನೀಡುವುದು ಮೊದಲ ಕರ್ತವ್ಯ. ನಿಷ್ಕಲ್ಮಶ, ಮುದ್ದು ಮುದ್ದಾದ ಮಕ್ಕಳೊಂದಿಗೆ ಕಾಲ ಕಳೆಯುವುದರ ಜೊತೆಜೊತೆಗೆ ಅವರಿಗೆ ಉತ್ತಮ ಸಂಸ್ಕಾರ, ದೇಶಭಕ್ತಿ, ನಮ್ಮ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರ ಚರಿತ್ರೆಯನ್ನು ಮನದಟ್ಟು ಮಾಡಿಕೊಡಬೇಕು.
ಮಕ್ಕಳು ಈ ದೇಶದ ಅಡಿಪಾಯ. ನಾವು ಹೇಗೆ ಮಕ್ಕಳನ್ನು ರೂಪಿಸುತ್ತೇವೆ ಎಂಬುದರ ಮೇಲೆ ಈ ದೇಶದ ಭವಿಷ್ಯ ಅಡಗಿದೆ. ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಓದಿನ ಜೊತೆಗೆ ಅವರಲ್ಲಿನ ಇತರೆ ಕೌಶಲ್ಯವನ್ನು ಗುರುತಿಸಿ ಬೆಳೆಸುವುದೇ ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ.
ಮಕ್ಕಳ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅವರ ಕನಸುಗಳನ್ನು ನನಸು ಮಾಡಬೇಕಿದೆ. ಕೊರೋನಾದ ಕರಿನೆರಳು ಮಕ್ಕಳ ಮೇಲೆ ಬೀಳದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲರಿಗೂ ಮತ್ತೊಮ್ಮೆ ಮಕ್ಕಳ ಜಯಂತಿಯ ಶುಭಾಶಯಗಳು ಎಂದು ಹೇಳಿದ್ದಾರೆ.