ಮೈಸೂರು, ಸೆಪ್ಟೆಂಬರ್ 28,2022(www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ನೋಡಿರದ ಗ್ರಾಮೀಣ ಜನತೆಗೆ ದಸರಾ ವೀಕ್ಷಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹಮ್ಮಿಕೊಂಡಿರುವ “ದಸರಾ ದರ್ಶನ” ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.
ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರು ಜಿಲ್ಲೆಯ 9 ತಾಲ್ಲೂಕಿನ ಮಹಿಳೆಯರು, ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಗ್ರಾಮೀಣ ಜನತೆಯನ್ನು ಕರೆತಂದು ದಸರಾವನ್ನು ದರ್ಶನ ಮಾಡಿಸುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದು ಹೇಳಿದರು.
ಇಂದಿನಿಂದ 3 ದಿನಗಳ ಕಾಲ ನಿಗಮದ 81 ವಾಹನಗಳಲ್ಲಿ ಸುಮಾರು 4455 ಜನತೆಯನ್ನು ಕರೆತಂದು ಅರಮನೆ, ಮೃಗಾಲಯ, ಜೆ.ಕೆ.ಗ್ರೌಂಡ್ಸ್ ನಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಿಸಲು ಮತ್ತು ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ದಸರಾ ಆಕರ್ಷಣೆಯಾದ ದೀಪಾಲಂಕಾರವನ್ನು ತೋರಿಸಿ ಪುನಃ ಮರಳಿ ಅವರವರ ತಾಲ್ಲೂಕುಗಳಿಗೆ ಮರಳಿ ಬಿಡಲಾಗುತ್ತದೆ ಎಂದರು.
ದಸರಾಗೆ ಸಾರಿಗೆ ಸಚಿವರು ಗೈರಾದ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲಾಖೆಯವರು ಸಚಿವರಿಗೆ ಆಹ್ವಾನ ನೀಡಿದ್ದರು. ಶ್ರೀರಾಮುಲು ಅವರು ಯಾವ ಕಾರ್ಯಕ್ರಮಕ್ಕೂ ಗೈರಾದ ಉದಾಹರಣೆ ಇಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಗೈರಾಗಿದ್ದರು ಎಂದು ಹೇಳಿದರು.
ದಸರಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಲು 21 ಸಮಿತಿಗಳನ್ನು ರಚಿಸಿದ್ದು ಅವುಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗಿದೆ. ಅವ್ಯವಸ್ಥೆ ಆಗದಂತೆ ಸಾರ್ವಜನಿಕರ ಸಲಹೆ ಸೂಚನೆ ಪಡೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳ ಜೊತೆಗೆ ಅಧಿಕಾರೇತರರನ್ನು ಸೇರಿಸಿಕೊಂಡು ದಸರಾ ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ.
ನಿನ್ನೆ ರಾತ್ರಿ ನಗರಪ್ರದಕ್ಷಿಣೆ ಮಾಡಿ ಸ್ವಚ್ಚತಾ ಕಾರ್ಯ ಪರಿಶೀಲನೆ ನಡೆಸಲಾಯಿತು. ಸ್ವಚ್ಚತಾ ಟೀಮ್ ಬೆಳಗ್ಗೆ 3 ಗಂಟೆಯವರೆಗೆ ಕೆಲಸ ಮಾಡುತ್ತಿದ್ದಾರೆ. ಆಹಾರ ಮೇಳಕ್ಕೆ 25 ರಿಂದ 30 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಯಾವುದೇ ಆಹಾರ ಪದಾರ್ಥ ವ್ಯರ್ಥ ಆಗಿಲ್ಲ. ಅಂದಿನ ದಿನದ ಕಸವನ್ನು ಅಂದೇ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ರಾಮದಾಸ್, ನಾಗೇಂದ್ರ, ಉಪಮೇಯರ್ ರೂಪಾ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
2008ರಿಂದ ದಸರಾ ದರ್ಶನ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಪ್ರತಿ ವಾಹನದಲ್ಲಿ ಒಬ್ಬ ಮೇಲ್ವಿಚಾರಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
Key words: Minister -ST Somashekhar – Dasara Darshan -program