ಚಿತ್ರದುರ್ಗಾ, ಏಪ್ರಿಲ್ 17, 2020 (www.justkannada.in):
ಚಿತ್ರದುರ್ಗ ಮುರುಘಾಮಠಕ್ಕೆ ಭೇಟಿ ನೀಡಿದ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು. ಶಾಸಕರಾದ ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.
ಇದೇ ವೇಳೆ, ಬಡವರಿಗೆ ಶ್ರೀಮುರುಘಾ ಮಠದಿಂದ ಕೊಡಮಾಡುವ ಆಹಾರ ಸಾಮಗ್ರಿಗಳನ್ನು ಮಾನ್ಯ ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರುಘಾ ಶರಣರು, ಸಚಿವರಾದ ಸೋಮಶೇಖರ್ ಅವರುಪ ಶ್ರೀ ಮಠದ ಜೊತೆ 20 ವರ್ಷಗಳಿಂದ ಅವಿನಾಭಾವ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಅವರು ಸಚಿವರಾಗಿರುವುದು ಸಂತಸದ ವಿಚಾರ. ಅವರು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಅನೇಕ ಬಡವರು ಊಟಕ್ಕೆ ಪರದಾಡುತ್ತಿದ್ದಾರೆ. ಇಂಥವರಿಗೋಸ್ಕರ ಮಠದಿಂದ ಪ್ರತಿದಿನ ಆಹಾರ ಸಾಮಗ್ರಿಯನ್ನು ಕೊಡುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಶ್ರೀಮಠದ ಕಾರ್ಯ ಶ್ಲಾಘನೀಯ
ನಾನು ಸುಮಾರು 22 ವರ್ಷ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮವನ್ನು ಮಾಡಿದ್ದೇನೆ. ಕೊರೋನಾ ಸನ್ನಿವೇಶದಲ್ಲಿ ಮಾನವೀಯತೆಯ ದೃಷ್ಟಿಯಿಂದ ಪ್ರತಿದಿನ ಆಹಾರ ಸಾಮಗ್ರಿ ವಿತರಣೆ ಮಾಡುತ್ತಿರುವ ಮಠಗಳಲ್ಲಿ ಶ್ರೀ ಮುರುಘಾಮಠ ಮೊದಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರಕ್ಕೂ ಸಾಕಷ್ಟು ಆರ್ಥಿಕ ಸಮಸ್ಯೆಯಾಗಿದೆ. ಆದರೂ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ಸಮಸ್ಯೆಯನ್ನು ಆದಷ್ಟು ಬೇಗ ಹೋಗಲಾಡಿಸಿ ಮತ್ತೆ ಸುಗಮ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ತಿಳಿಸಿದರು.