ಚಾಮರಾಜನಗರ,ಸೆಪ್ಟಂಬರ್,18,2020(www.justkannada.in): ಸಹಕಾರ ಸಂಸ್ಥೆ ಎಂದರೆ ಒಬ್ಬರಿಗೊಬ್ಬರು ಸಹಕಾರ ಕೊಡುವುದು. ಎಲ್ಲಿ ಅಸಹಕಾರವಿರುತ್ತದೋ, ಅಲ್ಲಿ ಸಂಸ್ಥೆಗಳು ಬೆಳೆಯುವುದಿಲ್ಲ. ಎಲ್ಲಿ ಆಡಳಿತ ಮಂಡಳಿಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಬದ್ಧತೆ ಇದ್ದರೆ ಅಂತಹ ಸಹಕಾರ ಸಂಸ್ಥೆಗಳು ಬೆಳೆಯುತ್ತವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ತೆಂಗು ಸಂಸ್ಕರಣಾ ಘಟಕದಿಂದ ತಯಾರಿಸಲಾದ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು, ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಈ ಯೋಜನೆಯಡಿ 39 ಸಾವಿರ ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗುತ್ತದೆ. 4 ವಿಭಾಗಗಳಲ್ಲಿ ಸಾಲ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ಬೆಂಗಳೂರು ವಿಭಾಗದಲ್ಲಿ ಚಾಲನೆ ನೀಡಲಾಗಿದೆ. ಇದೇ ಅಕ್ಟೋಬರ್ 2ರಂದು ಮೈಸೂರು ವಿಭಾಗದಲ್ಲಿ ವಿತರಣೆ ಮಾಡುತ್ತೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಆರ್ಥಿಕ ಸ್ಪಂದನ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಯಾರೆಲ್ಲ ಇದ್ದಾರೋ ಅಂಥವರಿಗೆ ಸಾಲವನ್ನು ಕೊಟ್ಟು ಅವರಿಗೆ ಆರ್ಥಿಕ ಬಲವನ್ನು ಕೊಡಲಾಗುವುದು. ಈ ಯೋಜನೆಯಿಂದ 2 ರಿಂದ 8 ಲಕ್ಷ ರೂ. ಹಾಗೂ ಇನ್ನೂ ಹೆಚ್ಚಿನ ಸಾಲವನ್ನುಒಬ್ಬೊಬ್ಬರು ಪಡೆಯುತ್ತಿದ್ದಾರೆ. ಅಗತ್ಯ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದು ಸಚಿವರಾದ ಎಸ್ ಟಿ ಸೋಮಶೇಖರ್ ತಿಳಿಸಿದರು.
ಯಾರಿಗೇ ಆದರೂ ನಾನು ಸಹಕಾರ ಸಚಿವನಾಗಿ ಸಂಪೂರ್ಣ ಸಹಕಾರ ಕೊಡುತ್ತೇನೆ. ನಾನು ಸಹಕಾರಿ ಕ್ಷೇತ್ರದಲ್ಲಿದ್ದಾಗ ಅನೇಕ ತೊಂದರೆ ಕೊಟ್ಟರು. ಆದರೆ, ನಾನು ಸಚಿವನಾಗಿ ಅಂತಹ ಕೆಲಸವನ್ನು ಎಂದೂ ಮಾಡುವುದಿಲ್ಲ. ರೈತರ ಶಕ್ತಿಗೆ ಪ್ರೇರಕವಾಗಿ ಸಹಕಾರ ಸಂಘ ಇರುತ್ತದೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ತಿಳಿಸಿದರು.
ಎಲ್ಲಾ ಜಿಲ್ಲೆಗಳಿಗೂ ಮಾದರಿ-ಸಚಿವ ಎಸ್.ಸುರೇಶ್ ಕುಮಾರ್
ನಾವೂ ಸಹ ನಂಜುಂಡಸ್ವಾಮಿಯವರ ಹೋರಾಟದಿಂದ ಪ್ರೇರಣೆ ಪಡೆದವರು. ತೆಂಗಿನ ವಿವಿಧ ಭಾಗಗಳಿಂದ ಹೇಗೆ ಲಾಭವನ್ನು ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಹಕಾರ ತತ್ವದಲ್ಲಿ ಪ್ರಾರಂಭವಾದ ಇದು ಎಲ್ಲ ಜಿಲ್ಲೆಗಳಿಗೂ ಮಾದರಿ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮತ್ತು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ತಿಳಿಸಿದರು.
ತೆಂಗಿಗೆ ಕಾಯಕಲ್ಪ ಬೇಕಿದೆ; ಸುತ್ತೂರು ಜಗದ್ಗುರುಗಳು
ಸುತ್ತೂರು ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಜಗದ್ಗುರುಗಳು ಸಾನ್ನಿಧ್ಯ ವಹಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಜನ ಶ್ರಮಜೀವಿಗಳಾಗಿದ್ದಾರೆ. ಹಿಂದೆ ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿದ್ದರು. ಆದರೆ, ಕಾಲಕ್ರಮೇಣ ನಷ್ಟ ಸೇರಿ ಇನ್ನಿತರ ಕಾರಣಗಳಿಂದ ಬೇರೆ ಬೇರೆ ಬೆಳೆಯತ್ತ ರೈತರು ದೃಷ್ಟಿ ಹರಿಸಿದರು. ಈಗ ತೆಂಗು ಸಹ ಪ್ರಮುಖ ಬೆಳೆಗಳಲ್ಲೊಂದಾಗಿದ್ದು, ಅವುಗಳಿಗೆ ಕಾಯಕಲ್ಪ ಒದಗಿಸಬೇಕಿದೆ ಎಂದು ತಿಳಿಸಿದರು.
ರೈತರು ಸರ್ಕಾರಗಳ ಮೇಲೆ ಅವಲಂಬಿತರಾಗದೇ ಅವರೇ ತೆಂಗು ಸಂಸ್ಕರಣಾ ಘಟಕವನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರೈತರು ಹೀಗೆ ಸಹಕಾರ ಸಂಘಗಳ ಮೂಲಕ ಸ್ವಯಂಪ್ರೇರಿತರಾಗಿ ಸತಂತ್ರವಾಗಿ ಕಾರ್ಯನಿರ್ವಹಿಸಿದರೆ ಬೆಳವಣಿಗೆ ಹೊಂದಲು ಸಾಧ್ಯ ಎಂದು ಹೇಳಿದರು.
ತೆಂಗು ಸಂಸ್ಕರಣಾ ಘಟಕ ಉದ್ಘಾಟನೆ
ಚಾಮರಾಜನಗರ ತಾಲೂಕಿನ ಮುಣಚನಹಳ್ಳಿ ತೆಂಗು ಸಂಸ್ಕರಣ ಘಟಕಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮತ್ತು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಹಾಗೂ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.
ತೆಂಗು ಸಂಸ್ಕರಣಾ ಘಟಕ ವೀಕ್ಷಣೆ
ಘಟಕದ ಕಾರ್ಯನಿರ್ವಹಣೆಯನ್ನು ಸಚಿವದ್ವಯರು ಖುದ್ದು ಪರಿಶೀಲಿಸಿದರು. ಬಳಿಕ ತೆಂಗಿನಕಾಯಿ ಸಂಸ್ಕರಣೆ ವೇಳೆ ಅದರ ಕರಟ, ತೆಂಗಿನ ಕಾಯಿಯ ಮೇಲು ಸಿಪ್ಪೆಗಳಂತಹ ಉಪ ಉತ್ಪನ್ನಗಳೂ ಲಭ್ಯವಾಗುವುದರಿಂದ ಅವುಗಳನ್ನು ಮಾರಾಟವನ್ನಾದರೂ ಮಾಡಬಹುದು. ಇಲ್ಲವೇ ಬೇರೆ ಉದ್ದೇಶಗಳಿಗೆ ಬಳಕೆಯನ್ನೂ ಮಾಡಬಹುದು ಎಂಬ ಬಗ್ಗೆ ವಿವರಣೆ ಪಡೆದುಕೊಂಡರು.
ಬಹುವರ್ಷಗಳ ಬೇಡಿಕೆಯಾದ ತೆಂಗು ಸಂಸ್ಕರಣಾ ಘಟಕವನ್ನು ಚಾಮರಾಜನಗರದಲ್ಲಿ ಪ್ರಾರಂಭಿಸಿರುವುದು ಸಂತಸದ ವಿಚಾರ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.
ರೈತ ನಾಯಕರಾದ ನಂಜುಂಡಸ್ವಾಮಿ ಪುತ್ಥಳಿ ಅನಾವರಣ
ರೈತ ನಾಯಕರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕಂಚಿನ ಪುತ್ಥಳಿಯನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಹಾಗೂ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಾಗೂ ಗಾಂಧಿವಾದಿಗಳಾದ ಪ.ಮಲ್ಲೇಶ್ ಅವರು ಅನಾವರಣಗೊಳಿಸಿದರು.
ಶಾಸಕರಾದ ಪುಟ್ಟರಂಗಶೆಟ್ಟಿ, ಸಿ.ಎಸ್. ನಿರಂಜನ್ ಕುಮಾರ್, ನರೇಂದ್ರ, ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ, ಚಾಮುಲ್ ಹಾಗೂ ತೆಂಗು ಸಂಸ್ಕರಣಾ ಘಟಕದ ನಿರ್ದೇಶಕರಾದ ಎಂ.ಎಸ್. ರವಿಶಂಕರ್, ತಾಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷರಾದ ಎ. ಮಹೇಶ್ ಪ್ರಭು ಸೇರಿದಂತೆ ಇತರರು ಇದ್ದರು.
Key words: Minister-ST Somashekhar – profitability – financial -vibrancy- scheme.