ಮೈಸೂರು,ಜೂ,8,2020(www.justkannada.in): ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಅವರ ಮಗ ಏನು ಕಡ್ಲೆ ಪುರಿ ತಿಂತಿದ್ರಾ’ ಎಂದು ಹೇಳಿಕೆ ನೀಡಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.
ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ರಾಕೇಶ್ ಸಿದ್ಧರಾಮಯ್ಯ ಕುರಿತು ಆಡಿರುವ ಮಾತುಗಳನ್ನು ಖಂಡಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಳೆದ ಎರಡು ದಿನಗಳ ಹಿಂದೆ ಉಸ್ತುವಾರಿ ಸಚಿವರು ‘ಸಿದ್ದರಾಮಯ್ಯನವರ ಮಗ ಏನು ಕಡ್ಲೆ ಪುರಿ ತಿಂತಿದ್ರಾ’ ಎಂದು ಹೇಳಿಕೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಘನತೆಗೆ ತಕ್ಕಂತೆ ಮಾತನಾಡಬೇಕು. ಮಾತನಾಡುವ ಮುನ್ನ ಎಚ್ಚರಿಕೆ ವಹಿಸಿ ಮಾತನಾಡಬೇಕೆಂದು ಎಚ್ಚರಿಕೆ ನೀಡಿದರು.
ಬಿಜೆಪಿ ಪಕ್ಷದ ಸಾಧನೆ ಕರಪತ್ರ ಹಂಚುತ್ತಿರುವುದಕ್ಕೆ ನಾಚಿಕೆ ಆಗಬೇಕು. ಅವರು ನೀಡಿರುವ ಸಾಧನೆಗಳ ಪಟ್ಟಿಯಲ್ಲಿ ಅಂಕಿ ಅಂಶಗಳೇ ತಾಳೆ ಆಗುತ್ತಿಲ್ಲ. ಕರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಚಪ್ಪಾಳೆ ತಟ್ಟಿ, ಮೋಂಬತ್ತಿ ಹಚ್ಚಿರುವುದೇ ನಿಮ್ಮ ಸಾಧನೆ ಎಂದು ಎಂ. ಲಕ್ಷ್ಮಣ್ ವ್ಯಂಗ್ಯವಾಡಿದರು.
ಪಿಎಂ ಕೇರ್ ಫಂಡ್ ಗೆ ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಕರ್ನಾಟಕ ರಾಜ್ಯದಿಂದಲೇ ಕಡಿಮೆ ಎಂದರೂ 50 ಸಾವಿರ ಕೋಟಿಯಷ್ಟು ಹಣ ಸಂದಾಯವಾಗಿದೆ. ಆ ಹಣವನ್ನೆಲ್ಲಾ ಏನು ಮಾಡಿದಿರಿ. ಹಾಗಿದ್ದರೆ ದೇಶಾದ್ಯಂತ ಎಷ್ಟು ಹಣವನ್ನು ಸಂಗ್ರಹಿಸಿದ್ದೀರಿ..? ಎಂದು ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನೆ ಹಾಕಿದರು.
ಹಾಗೆಯೇ ಪೌರತ್ವ ಕಾಯಿದೆ ತಂದು ಜನರನ್ನು ಒಕ್ಕಲೆಬ್ಬಿಸುತ್ತಿದ್ದೀರಿ. ಬಡವರು, ರೈತರು, ಮಹಿಳೆಯರು ಹಾಗೂ ಯುವಜನರ ಏಳಿಗೆ ನಮ್ಮ ಬದ್ಧತೆ ಹಾಗೂ ಆದ್ಯತೆ ಎಂದು ಭರವಸೆ ನೀಡಿದ್ದರು. ಆದರೆ ದೇಶಾದ್ಯಂತ ಸುಮಾರು 13 ಕೋಟಿಯಷ್ಟು ಜನರು ಕೆಲಸ ಕಳೆದು ಕೊಂಡಿದ್ದಾರೆ. 25 ಕ್ಕೂ ಹೆಚ್ಚು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ್ದೀರಿ ಎಂದು ಪ್ರಧಾನಿ ಮೋದಿ ವಿರುದ್ಧ ಎಂ. ಲಕ್ಷ್ಮಣ್ ಕಿಡಿಕಾರಿದರು.
Key words: Minister- ST Somashekhar- statement – Rakesh Siddaramaiah-KPCC- spokesperson- M. Laxman.