ಬಾಲ ಕಾರ್ಮಿಕ-ಬಾಲ್ಯ ವಿವಾಹ ಸಮಸ್ಯೆ ಪರಿಶೀಲನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ…

ಬೆಂಗಳೂರು,ಫೆಬ್ರವರಿ,11,2021(www.justkannada.in):  ಕೊರೋನಾ ಸೋಂಕು ಪ್ರಸರಣದಿಂದಾಗಿ ಹಲವು ತಿಂಗಳು ಶಾಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ  ಬಾಲ ಕಾರ್ಮಿಕರ ಹಾಗೂ ಬಾಲ್ಯ ವಿವಾಹಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿ ಪರಿಹಾರ ಕ್ರಮಗಳಿಗೆ ಮುಂದಾಗಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.jk

ಗುರುವಾರ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಸುರೇಶ್ ಕುಮಾರ್, ಪ್ರತಿ ತಾಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ-ಸಿಡಿಪಿಒ, ಕಾರ್ಮಿಕ ಇಲಾಖೆಯ ತನಿಖಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಿ ಒಂದು ತಿಂಗಳ ಅವಧಿಯಲ್ಲಿ ತಪಾಸಣೆಗಳನ್ನು ಪೂರ್ಣಗೊಳಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಬಾಲ ಕಾರ್ಮಿಕ ಸಮಸ್ಯೆಯ ಸುಳಿಗೆ ಸಿಲುಕಿದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರೆಸುವ, ಬಾಲ್ಯ ವಿವಾಹದ ಸುಳಿಗೆ ಸಿಕ್ಕ ವಿದ್ಯಾರ್ಥಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾಭ್ಯಾಸ, ಪುನರ್ವಸತಿ ಕಲ್ಪಿಸುವ ಬಗ್ಗೆ ಈ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕೆಂದೂ ಸುರೇಶ್ ಕುಮಾರ್ ತಿಳಿಸಿದ್ದಾರೆ.minister-suresh kumar-instruct- Child labor-child marriage- problem –Inspection

ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಲಭ್ಯವಿರುವ ಈ ಮಾದರಿಯ ಅಂಕಿಅಂಶಗಳನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗಳೊಂದಿಗೆ ಹಂಚಿಕೊಂಡು ಈ ಸಮೀಕ್ಷೆಯನ್ನು ಯಶಸ್ವಿಗೊಳಿಸುವುದಲ್ಲದೇ ಕೋವಿಡ್ ಕಾರಣದಿಂದಾಗಿ ಕಲಿಕಾ ಪ್ರಕ್ರಿಯೆಯಿಂದ ಹೊರಗುಳಿದಿರುವ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಎಲ್ಲ ಕ್ರಮಗಳಿಗೆ ಚಾಲನೆ ನೀಡಬೇಕೆಂದು ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

Key words: minister-suresh kumar-instruct- Child labor-child marriage- problem –Inspection