ಬೆಂಗಳೂರು,ಆ,11,2020(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 616 ಅಂಕಗಳನ್ನ ಗಳಿಸಿ ಸಾಧನೆ ಮಾಡಿರುವ ಗುಡಿಸಲಿನಲ್ಲಿ ವಾಸವಿರುವ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆತ್ಮಸ್ಥೈರ್ಯ ತುಂಬಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್, ಪ್ರತಿಭಾವಂತ ವಿದ್ಯಾರ್ಥಿ ವಾಸವಿರುವ ಗುಡಿಸಿಲಿಗೆ ಖುದ್ದು ತೆರಳಿ ಆತನನ್ನು ಅಭಿನಂಧಿಸಿದ್ದಾರೆ.
ಜತೆಗೆ ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಟೋ ಹಂಚಿಕೊಂಡಿದ್ದು, ವಿದ್ಯಾರ್ಥಿಗೆ ಆತ್ಮ ಸ್ಥೈರ್ಯ ತುಂಬಿದ್ದು ಹೀಗೆ….
ಮಹೇಶ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿರುವ ಕುಟುಂಬಕ್ಕೆ ಸೇರಿದ ಬಾಲಕ. ಇಂದಿರಾನಗರದ ಜೀವನಭೀಮಾನಗರದ ವ್ಯಾಪ್ತಿಯಲ್ಲಿರುವ ಕರ್ನಾಟಕ ಸರ್ಕಾರದ ಕರ್ನಾಟಕ ಪಬ್ಲಿಕ್ ಶಾಲೆಯ (KPS) ವಿದ್ಯಾರ್ಥಿ. ಇಂದು ಮಹೇಶ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕಗಳನ್ನು ಪಡೆದು ಎಲ್ಲರಿಂದ ಭೇಶ್ ಎನಿಸಿಕೊಂಡಿದ್ದಾನೆ. ಅವರ ತಾಯಿ ಮಲ್ಲವ್ವ ಅವರಿವರ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದಾರೆ.
ಮಹೇಶ ಸಹ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸವನ್ನು ಇದುವರೆಗೆ ಮುಗಿಸಿದ್ದಾನೆ. ಇಂದು ಅವನ ಮನೆಯೆಂದು ಕರೆಯಬಹುದಾದ ಪುಟ್ಟ ಗುಡಿಸಲಿಗೆ ನಾನೇ ಹೋಗಿದ್ದೆ. ಮನೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಮಹೇಶನಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ಬಂದಿದ್ದೇನೆ. ಮಹೇಶನಿಗೆ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಓದಬೇಕೆಂಬ ಮಹದಾಸೆಯಿದೆ. ಅವನ ಮನೆ, ಅವನ ಕುಟುಂಬ, ಅವರ ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲ ಕಂಡಾಗ ಕಣ್ತುಂಬಿ ಬಂತು – ಅದೇ ರೀತಿ ಹೃದಯ ತುಂಬಿ ಬಂತು ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Key words: minister- suresh kumar-visit-sslc-student-tent- Achievement