ಮಂಡ್ಯ,ಅಕ್ಟೊಂಬರ್,04,2020(www.justkannada.in) :ಕೊರೊನಾ ನಿಯಂತ್ರಣದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಪೌರ ಕಾರ್ಮಿಕರು. ಈ ಕಾರಣಕ್ಕಾಗಿ ಪೌರ ಕಾರ್ಮಿಕರನ್ನ ಸನ್ಮಾನಿಸುವುದರ ಜೊತೆಗೆ ಅವರಿಗೆ ಊಟ ಬಡಿಸಿ, ಬಳಿಕ ತಾವೂ ಅವರ ಜೊತೆಯಲ್ಲಿ ಕುಳಿತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಊಟ ಮಾಡಿದ್ದಾರೆ.ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪೌರಕಾರ್ಮಿಕ ದಿನಾಚರಣೆ ಮುಗಿಸಿ, ಪೌರ ಕಾರ್ಮಿಕರ ಜೊತೆ ಊಟಕ್ಕೆ ತೆರಳಿದ ಸಚಿವರು, ಮೊದಲು ಪೌರ ಕಾರ್ಮಿಕರಿಗೆ ಊಟ ಬಡಿಸಿದರು. ಆನಂತರ ಪೌರ ಕಾರ್ಮಿಕರ ಜೊತೆಯಲ್ಲೇ ಕುಳಿತು ಊಟ ಮಾಡಿದರು.ಇದಕ್ಕು ಮುನ್ನ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಚಿವರು, ಸ್ವಚ್ಚತೆ ಮೂಲಕ ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ಪೌರ ಕಾರ್ಮಿಕರ ಕಾರ್ಯವನ್ನ ಎಷ್ಟು ಶ್ಲಾಘಿಸಿದರೂ ಸಾಲದು. ಕೊರೊನಾ ನಿಯಂತ್ರಣದಲ್ಲಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದೆ. ಪೌರಕಾರ್ಮಿಕರು, ಜಿಲ್ಲಾಡಳಿತದ ಉತ್ತಮ ಕಾರ್ಯದಿಂದ ಇದು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಪೌರಕಾರ್ಮಿಕರ ಪಾದ ತೊಳೆದು ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟು ಉತ್ತಮವಾದ ಕಾರ್ಯವನ್ನು ಪೌರ ಕಾರ್ಮಿಕರು ಮಾಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಹೇಳಿದರು.
ಜಿಲ್ಲೆಯಲ್ಲಿ ಕೊರೊನಾದಿಂದ ಮೃತ ಪಟ್ಟ 42 ಜನರನ್ನ ದಫನ್ ಮಾಡಿದ ಜೆಸಿಬಿ ಚಾಲಕ ರಂಗಸ್ವಾಮಿ ಕಾರ್ಯ ಶ್ಲಾಘನೀಯ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದು, ಪೌರಾಡಳಿತ ಇಲಾಖೆ. ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯವರು. ಎಸ್ ಎಮ್ ಕೃಷ್ಣ ಅವರನ್ನ ಬಿಟ್ಟರೆ ಜಿಲ್ಲೆಗೆ ಹೆಚ್ಚಿನ ಕೆಲಸ ಮಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಎಂದರು.
ಮೈಶುಗರ್ ಸಕ್ಕರೆ ಕಾರ್ಖಾನೆ ಕೂಡ ಇಷ್ಟೊತ್ತಿಗಾಗಲೆ ಆರಂಭ ಆಗಬೇಕಿತ್ತು. ಕಳೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಬೇಕಿತ್ತು. ಆದರೆ, ಕಾರ್ಖಾನೆ ವಿಚಾರವಾಗಿ ರಚನೆ ಆಗಿದ್ದ ಸಮಿತಿಯ ಅಧ್ಯಕ್ಷರಾದ ಡಿಸಿಎಂ ಗೋವಿಂದ್ ಕಾರಜೋಳ ಅವರು ಕೊರೊನಾ ಪಾಸಿಟಿವ್ ಆಗಿರುವ ಕಾರಣ ಸಂಪುಟ ಸಭೆಗೆ ಬರಲು ಸಾಧ್ಯವಾಗಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಇದೆ ವೇಳೆ ಕೊರೊನಾ ತಡೆಗಟ್ಟುವಲ್ಲಿ ಶ್ರಮಿಸಿದ ಪೌರ ಕಾರ್ಮಿಕರನ್ನ ಸನ್ಮಾನಿಸಲಾಯಿತು. ಪೌರ ಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು. ಇದೆ ವೇಳೆ ನಗರಸಭೆಯ ನೂತನ ಸ್ವಚ್ಚತಾ ನಿರ್ವಹಣಾ ವಾಹನಗಳಿಗೆ ಸಚಿವರು ಹಸಿರು ನಿಶಾನೆ ನೀಡಿದರು.
key words : Minister-Narayana Gowda-who-served-lunch -civil-workers-sat-down-them