ಬೆಂಗಳೂರು,ಡಿಸೆಂಬರ್,18,2020(www.justkannada.in) : ಕೊರೊನಾ ಸೋಂಕಿಗೆ ಬಲಿಯಾದ ತುಮಕೂರು ಜಿಲ್ಲೆಯ ಗುಬ್ಬಿ ಪ್ರಜಾವಾಣಿ ವರದಿಗಾರ ಜಯಣ್ಣ ಅವರ ಕುಟುಂಬಕ್ಕೆ ವಸತಿ ಕಲ್ಪಿಸಲು ವಸತಿ ಸಚಿವ ವಿ.ಸೋಮಣ್ಣ ಆದೇಶ ನೀಡಿದ್ದಾರೆ.ಪತ್ರಕರ್ತ ಜಯಣ್ಣ ಸಾವಿನ ಬಳಿಕ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಪತ್ನಿ ಜ್ಯೋತಿ ಅವರು ಈ ಬಗ್ಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದಿದ್ದರು. ತುಮಕೂರು ಜಿಲ್ಲೆ ಕಾರ್ಯ ನಿರತ ಪತ್ರಕರ್ತರ ಸಂಘವು ಈ ಬಗ್ಗೆ ರಾಜ್ಯ ಸಂಘದ ಗಮನ ಸೆಳೆದಿತ್ತು.
ಒಂದಿಷ್ಟು ಜಮೀನು, ನಿವೇಶನ, ಮನೆ ಯಾವುದೂ ಇಲ್ಲದೆ, ಈಗಲೂ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಮತ್ತು ಮಕ್ಕಳನ್ನು ಸಾಕಬೇಕಾಗಿರುವ ಸಂಕಷ್ಟದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಗುಬ್ಬಿ ಪಟ್ಟಣದಲ್ಲಿ ಮನೆ ಕೊಡಿಸಲು ಸೂಚಿಸಿದ್ದಾರೆ.
ಈ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾತನಾಡಿ, ಪಟ್ಟಿಯಲ್ಲಿ ಹೆಸರು ಸೇರಿಸಿ ಕಳುಹಿಸಲು ಸೂಚಿಸಿದ್ದಾರೆ. ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಇದೇ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ನೆರವು ಮಂಜೂರು ಮಾಡಿಸಿರುವುದು ಶ್ಲಾಘನೀಯ.
ಪತ್ರಕರ್ತನ ಕುಟುಂಬದ ಸಂಕಷ್ಟ ಅರಿತು, ಮನೆ ಮಂಜೂರಿಗೆ ಆದೇಶಿಸಿದ ವಸತಿ ಸಚಿವ ಸೋಮಣ್ಣ ಅವರಿಗೆ ಸಕಾಲದಲ್ಲಿ ಸರ್ಕಾರದ ಗಮನಕ್ಕೆ ತಂದು ನೆರವು ಕೊಡಿಸಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ತುಮಕೂರು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ ಅವರು ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
key words : Minister-Somanna-orders-granting-house-family-journalist-who-fallen-victim-Corona