ಬೆಂಗಳೂರು,ಜೂನ್,17,2021(www.justkannada.in): ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯುವ ವಿಚಾರದಲ್ಲಿ ಪರ ಮತ್ತು ವಿರೋಧಗಳು ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭಿನ್ನಮತ ಶಮನಕ್ಕಾಗಿ ಅಖಾಡಕ್ಕೆ ಇಳಿದಿದ್ದು ಶಾಸಕರ ಜೊತೆ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಏರುಪೇರು ಉಂಟಾಗುವ ವೇಳೆಯಲ್ಲಿಯೇ ದೆಹಲಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ಶಾಸಕ ಅರವಿಂದ್ ಬೆಲ್ಲದ್ ಇದೀಗ ಫೋನ್ ಕದ್ಧಾಲಿಕೆಯ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪ್ ಆಗಿದೆ. ನನ್ನನ್ನ ಫಾಲೋ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.
ಕುಮಾರಕೃಪಾ ಗೆಸ್ಟ್ಹೌಸ್ ಬಳಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಕಳೆದ ಒಂದು ತಿಂಗಳಿನಿಂದ ನನ್ನ ಫೋನ್ ಟ್ಯಾಪ್ ಆಗುತ್ತಿದೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಯಾರೆಂದು ಕೇಳಿದಾಗ ಯುವರಾಜ ಸ್ವಾಮಿ ಎಂದು ಹೇಳಿಕೊಂಡರು. ನನಗೇಕೋ ಈ ಕರೆ ಸರಿ ಎನಿಸದ ಕಾರಣ ನಾನು ಕರೆಯನ್ನ ಕಟ್ ಮಾಡಿದೆ.
ಆದರೆ ಈ ಘಟನೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ನನ್ನ ಮೊಬೈಲ್ ಗೆ ಮತ್ತೊಮ್ಮೆ ಕರೆ ಬಂದಿತ್ತು. ಆಗಲೂ ಸಹ ತಾನು ಯುವರಾಜ ಸ್ವಾಮಿ ಎಂದು ಹೇಳಿಕೊಂಡ ವ್ಯಕ್ತಿ, ನನ್ನನ್ನ ಅನವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನನಗೆ ಸಹಾಯ ಮಾಡಿ ಎಂದಿದ್ದರು. ಆದರೆ ಈ ಕರೆಯ ಹಿಂದೆ ನನ್ನ ವಿರುದ್ಧ ದೊಡ್ಡ ಪಿತೂರಿಯೇ ಇದೆ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.
Key words: MLA -Aravind Bellad- phone tapping- bomb