ಬೆಂಗಳೂರು, ಏಪ್ರಿಲ್ 10,2024 (www.justkannada.in): ಬಿಜೆಪಿ-ಜೆಡಿಎಸ್ ಮೈತ್ರಿ ನೋಡಿ ಕಾಂಗ್ರೆಸ್ ಗೆ ಆತಂಕ ಮತ್ತು ನಡುಕ ಶುರುವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಡಾ.ಸಿ. ಎನ್ ಅಶ್ವಥ್ ನಾರಾಯಣ್ ಕುಟುಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವತ್ ನಾರಾಯಣ್, ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ವಿಜಯನಗರದ ಆದಿಚುಂಚನಗರಿ ಮಠಕ್ಕೆ ಭೇಟಿ ನೀಡಿ ಡಾ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡು ಒಗ್ಗಟ್ಟಿನ ಸಂದೇಶವನ್ನು ನೀಡಿದ್ದೇವೆ. ಈ ಒಗ್ಗಟ್ಟಿನ ಸಂದೇಶ ನೋಡಿ ಕಾಂಗ್ರೆಸ್ಸಿನವರಿಗೆ ಆತಂಕ ಮತ್ತು ನಡುಕ ಉಂಟಾಗಿದೆ ಎಂದು ಟೀಕಿಸಿದರು.
ಮೈತ್ರಿ ಸರ್ಕಾರವನ್ನ ಬಿಜೆಪಿ ಬೀಳಿಸಿದ್ದು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರಗೇಟು ನೀಡಿದ ಅಶ್ವಥ್ ನಾರಾಯಣ್, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರವನ್ನು ಈ ಹಿಂದೆ ಬೀಳಿಸಿದ್ದು ಯಾರೆಂದು ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್ಸಿನ ವರಿಷ್ಠರು ಜೊತೆಗಿದ್ದೇ ಕುತ್ತಿಗೆ ಕೊಯ್ದರು ಎಂದು ಅವರು ಹೇಳಿದ್ದಾರೆ ಎಂದರು.
ಸೋಲಿನ ಆತಂಕ ಕಾಂಗ್ರೆಸ್ಸಿನವರನ್ನು ಕಾಡುತ್ತಿದ್ದು, ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಏನೇ ಆದರೂ ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಮೂಲಕ ನಮ್ಮ 28 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ಅಶ್ವಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
Key words: MLA- Aswath Narayan- congress- nervous – BJP-JDS -alliance.