ಮೈಸೂರು,ಜನವರಿ,6,2025 (www.justkannada.in): ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರ ಸಂಬಂಧ ಯಾವುದೇ ಕಾರಣಕ್ಕೂ ಮೈಸೂರು ರಾಜಮನೆತನಕ್ಕೆ ಅಪಮಾನ ಮಾಡಲ್ಲ ಎಂದು ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ಸ್ಪಷ್ಟನೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹರೀಶ್ ಗೌಡ, ಪ್ರಿನ್ಸಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಮೈಸೂರಿನ ಡಿಸಿ ಹಾಗೂ ನಗರ ಪಾಲಿಕೆ ಕಮಿಷನರ್ ನಾನು ಪತ್ರ ಬರೆದಿದ್ದೆ. ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡಲು ಮನವಿ ಮಾಡಿದ್ದೆ. ಈ ರಸ್ತೆಯಲ್ಲಿ ಹಲವು ಆಸ್ಪತ್ರೆಗಳ ನಿರ್ಮಾಣ ಆಗಿದೆ. ಇದೆಲ್ಲವನ್ನ ನಿರ್ಮಾಣ ಮಾಡಿದ್ದು ಸಿದ್ದರಾಮಯ್ಯನವರು. ಹೀಗಾಗಿ ಆ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಮನವಿ ಮಾಡಿದ್ದೆ. ಪಾಲಿಕೆ ಕೌನ್ಸಿಲ್ ನಲ್ಲಿ ಅದು ನಿರ್ಧಾರ ಆಗಿಲ್ಲ. ಕೇವಲ ಅನುಮೋದನೆ ಮಾತ್ರ ಸಿಕ್ಕಿದೆ. ಸಾರ್ವಜನಿಕ ಆಕ್ಷೇಪಣೆ ಇದ್ದರೆ ತಿಳಿಸಲು ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಹೆಸರು ಬದಲಾವಣೆ ಮಾಡಬಾರದು ಎಂದು ಸಾಮಾಜಿಕ ಕಾರ್ಯಕರ್ತರು, ಯದುವೀರ್ ಆಕ್ಷೇಪಣೆ ಸಲ್ಲಿಸಿದ್ದಾರೆ. ಮೈಸೂರು ಮಹಾರಾಜರ ಬಗ್ಗೆ ನನಗೆ ಗೌರವ ಇದೆ. ಮೈಸೂರು ಮಹಾರಾಜರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಸೂರ್ಯ ಚಂದ್ರ ಇರುವವರೆಗೂ ಶಾಶ್ವತ. ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಕಾಂಗ್ರೆಸ್ ನಲ್ಲಿ ಸಂಸದರಾಗಿದ್ರು. ಯದುವೀರ್ ರವರು ಬಿಜೆಪಿ ಯಲ್ಲಿ ಸಂಸದರಾಗಿದ್ದಾರೆ. ಇದರ ಬಗ್ಗೆ ನಮಗೇನು ಬೇಸರ ಇಲ್ಲ. ಯದುವೀರ್ ಬಿಜೆಪಿ ಸಂಸದರಾಗಿರುವ ಕಾರಣ ವಿರೋಧ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂದರು.
ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ರಾಯಲ್ ಇನ್ ಜಂಕ್ಷನ್ ವರೆಗೆ ಆ ರಸ್ತೆಗೆ ಯಾವುದೇ ಹೆಸರು ಇಲ್ಲ. ಪ್ರಿನ್ಸಸ್ ರಸ್ತೆ ಎಲ್ಲಿಯ ತನಕ ಇದೆ ಎಂದು ಯಾರು ಬೇಕಾದರು ಪರಿಶೀಲನೆ ಮಾಡಲಿ. ದಾಸಪ್ಪ ವೃತ್ತದಿಂದ ಲಕ್ಷ್ಮಿವೆಂಕಟರಮಣ ದೇವಸ್ಥಾನವರೆಗೆ ಪ್ರಿನ್ಸಸ್ ರಸ್ತೆ ಅಂತಾನೆ ಇರೋದು. ಲಕ್ಷ್ಮಿವೆಂಕಟರಮಣ ದೇವಸ್ಥಾನದಿಂದ ಮುಂದಕ್ಕೆ ಹೋಗುವ ರಸ್ತೆಗೆ ಯಾವುದೇ ಹೆಸರಿಲ್ಲ ಎಂದು ಹರೀಶ್ ಗೌಡ ತಿಳಿಸಿದರು.
ಪ್ರಿನ್ಸಸ್ ರಸ್ತೆ ಇರುವಲ್ಲಿ ಮೂರು ಕಡೆ ಪ್ರಿನ್ಸಸ್ ರಸ್ತೆ ಎಂದು ನಾಮಫಲಕ ಅಳವಡಿಸುತ್ತೇವೆ. ಸೂಕ್ತವಾದ ಸ್ಥಳದಲ್ಲಿ ಕೆಂಪಚೆಲುವಾಜಮ್ಮಣ್ಣಿಯವರ ಪ್ರತಿಮೆ ಸ್ಥಾಪನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೈಸೂರು ರಾಜಮನೆತನಕ್ಕೆ ಅಪಮಾನ ಮಾಡುವುದಿಲ್ಲ ಎಂದು ಶಾಸಕ ಕೆ ಹರೀಶ್ ಗೌಡ ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ಅವರಿಗೂ ರಸ್ತೆಗೆ ಹೆಸರಿಡುವ ವಿಚಾರ ಗೊತ್ತಿಲ್ಲ.ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪರಿಗೂ ಈ ವಿಚಾರ ಗೊತ್ತಿರಲಿಲ್ಲ. ಮನವಿ ಪತ್ರ ಕೊಡುವ ವೇಳೆ ಮಹದೇವಪ್ಪರಿಗೆ ತಿಳಿಸಿದ್ದೆ. ಸಿದ್ದರಾಮಯ್ಯ ಹೆಸರಿಡಲು ವಿರೋಧ ಮಾಡ್ತಿರುವವರ ಬಳಿ ಮನವಿ ಮಾಡುತ್ತೇನೆ. ಯಾರು ಕೂಡ ಇದಕ್ಕೆ ವಿರೋಧ ಮಾಡಬೇಡಿ. ಸಿದ್ದರಾಮಯ್ಯ ಕೊಟ್ಟ ಕೊಡುಗೆಗಳು ನಮ್ಮ ಕಣ್ಣ ಮುಂದಿದೆ. ಇದನ್ನ ರಾಜಕೀಯವಾಗಿ ಯಾರು ತರಬೇಡಿ. ನನ್ನಿಂದ ಯಾರ ಮನಸ್ಸಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದರು.
ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹರೀಶ್ ಗೌಡ, ದೇವೇಗೌಡರಿಗೂ ಗೌರವ ಸಲ್ಲಿಸಿದ್ದೇವೆ. ದೇವೇಗೌಡರನ್ನ ನಾವು ಮರೆತಿಲ್ಲ. ಮೈಸೂರಿನ ವೃತ್ತವೊಂದಕ್ಕೆ ದೇವೇಗೌಡರ ಹೆಸರನ್ನೇ ಇಟ್ಟಿದ್ದೇವೆ. ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಯಾರಿಗಾದರೂ ಗೊಂದಲ ಇದ್ದರೆ ಚರ್ಚೆ ಮಾಡೋಣ. ಯಾರು ಎಲ್ಲಿಗೆ ಬೇಕಾದರು ಕರೆದರೂ ನಾನು ಹೋಗುತ್ತೇನೆ. ಈ ಸಮಸ್ಯೆಯನ್ನ ಕುಳಿತು ಬಗೆಹರಿಸೋಣ. ಸಿದ್ದರಾಮಯ್ಯ ಹೆಸರಿಡೋದಕ್ಕೆ ವಿರೋಧ ಮಾಡಬೇಡಿ ಎಂದು ಶಾಸಕ ಹರೀಶ್ ಗೌಡ ಮನವಿ ಮಾಡಿದರು.
Key words: CM Siddaramaiah, road, MLA, K. Harish Gowda