ಮೈಸೂರು,ಮಾರ್ಚ್,30,2021(www.justkannada.in): ಮೈಸೂರು ಮೈಮುಲ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಶಾಸಕ ಜಿ.ಟಿ.ದೇವೇಗೌಡ ಮತ್ತೆ ಟಕ್ಕರ್ ಕೊಟ್ಟಿದ್ದಾರೆ.
ಪಿರಿಯಾಪಟ್ಟಣ ಶಾಸಕ ಮಹದೇವ್ ಪುತ್ರ ಪ್ರಸನ್ನರಿಗೆ ಮೈಮುಲ್ ಅಧ್ಯಕ್ಷ ಸ್ಥಾನ ಒಲಿದಿದೆ. ಮೈಮುಲ್ ಅಧ್ಯಕ್ಷರಾಗಿ ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಶಾಸಕ ಮಹದೇವ್ ಪುತ್ರನ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ ವಿರೋಧದ ನಡುವೆ ಪ್ರಸನ್ನ ಗೆಲುವು ಸಾಧಿಸಿದ್ದರು.
ಇದೀಗ ಮಹದೇವ್ ಪುತ್ರ ಪ್ರಸನ್ನ ಅವರನ್ನೇ ಮೈಮುಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಿ.ಟಿ.ದೇವೆಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮೈಸೂರು ಮೈಮುಲ್ ನಲ್ಲಿ ಜಿಟಿಡಿ ಬಣದ 12 ಮಂದಿ ನಿರ್ದೇಶಕರಿದ್ದರು. ಸಾಕಷ್ಟು ಜನ ಹಿರಿಯರು ರೇಸ್ ನಲ್ಲಿದ್ದರು ಎರಡನೇ ಬಾರಿಗೆ ಗೆದ್ದ ಪ್ರಸನ್ನರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಕುಮಾರಸ್ವಾಮಿ ಆದೇಶ ಪಾಲನೆ ಮಾಡಿ-ಮಾತಿನಲ್ಲು ಹೆಚ್ಡಿಕೆಯ ಕಾಲೆಳೆದ ಜಿಟಿ.ದೇವೇಗೌಡ…
ಖಾಸಗಿ ಹೋಟೆಲ್ ನಲ್ಲಿ ಮೈಮುಲ್ ನೂತನ ಅಧ್ಯಕ್ಷ ಪ್ರಸನ್ನ ಅವರನ್ನ ಸನ್ಮಾನಿಸಿದ ಬಳಿಕ ಮಾತನಾಡಿದ ಶಾಸಕ ಜಿಟಿ ದೇವೇಗೌಡರು, ಕುಮಾರಸ್ವಾಮಿ ಆದೇಶ ಪಾಲನೆ ಮಾಡಿ ಎಂದು ಮೈಮುಲ್ನ ನೂತನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಲಹೆ ನೀಡುವ ಮೂಲಕ ಮಾತಿನಲ್ಲು ಹೆಚ್ಡಿಕೆಯ ಕಾಲೆಳೆದರು.
ಭ್ರಷ್ಟಾಚಾರ, ಅನ್ಯಾಯ ಆಗುತ್ತಿದೆ ಅಂತ ನಮ್ಮ ಸನ್ಮಾನ್ಯ ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ. ಕುಮಾರಸ್ವಾಮಿಯವರ ಮಾತನ್ನ ಮನಸ್ಸಿನಲ್ಲಿಟ್ಟುಕೊಳ್ಳಿ. ರಾಜ್ಯದಲ್ಲಲ್ಲ ದೇಶದಲ್ಲೆ ಮಾದರಿ ಡೈರಿಯನ್ನಾಗಿ ಮೈಮುಲ್ ಡೈರಿಯನ್ನ ನಡೆಸಿ. ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ, ಕುಮಾರಸ್ವಾಮಿ ಮಾತನ್ನ ನೆನಪಿನಲ್ಲಿಟ್ಟುಕೊಳ್ಳಿ. ಕುಮಾರಸ್ವಾಮಿಯವರು ತಮ್ಮ ಅನುಭವದ ಮಾತುಗಳನ್ನ ಹೇಳಿದ್ದಾರೆ. ಎರಡು ಬಾರಿ ಸಿಎಂ ಆಗಿ ರೈತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಅವರ ಮನಸ್ಸಿಗೆ ನೋವಾಗಿ ಡೈರಿ ಭ್ರಷ್ಟಚಾರದ ಬಗ್ಗೆ ಮಾತನಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಪೈಪೋಟಿ ಇರುತ್ತೆ ಆಗ ಕೆಲವು ಮಾತುಗಳನ್ನಾಡಿರುತ್ತಾರೆ. ಅವರು ಹೇಳಿದ್ದು ಮುಂದೆ ಆಗಬಾರದು ಅಂತ ಹೊಸ ಅಧ್ಯಕ್ಷರಿಗೆ ಸೂಚಿಸಿದ್ದೇನೆ ಎಂದು ಜಿ.ಟಿ ದೇವೇಗೌಡರು ಹೇಳಿದರು.
Key words: MLA Mahadev – son – Prasanna- elected –mymul-president