ಮೈಸೂರು,ಜುಲೈ,1,2021(www.justkannada.in): ಶಾಸಕ ಮುನಿರತ್ನ ಕೇಸ್ ಈಗಾಗಲೇ ಇತ್ಯರ್ಥವಾಗಿದೆ. ರಮೇಶ್ ಜಾರಕಿಹೊಳಿ ಕೇಸ್ ಕೂಡ ಕ್ಲಿಯರ್ ಆಗಲಿದೆ. ಹೀಗಾಗಿ ಶಾಸಕ ಮುನಿರತ್ನ, ರಮೇಶ್ ಜಾರಕಿಹೊಳಿ ಯಾಕೆ ಸಂಪುಟ ಸೇರಬಾರದು ಎಂದು ಸಚಿವ ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ. ಮುಂದಿನ ಎರಡು ವರ್ಷ ಬಿಎಸ್ವೈ ಸಿಎಂ ಆಗಿರ್ತಾರೆ. ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಯಾರ್ಯಾರೋ ದೆಹಲಿಗೆ ಹೋಗಿ ಬಂದಿದ್ದಾರೆ. ದೆಹಲಿ ಪ್ರವಾಸ ಮಾಡಬಾರದೆಂದು ನಿಯಮ ಇದ್ಯಾ. ಅವರವರ ಕೆಲಸಕ್ಕೆ ಹೋಗಿ ಬಂದಿದ್ದಾರೆ. ಜಾರಕಿಹೊಳಿಗೆ ಬಾಂಬೆಯಲ್ಲಿ ಸ್ವಂತ ಮನೆ ಇದೆ. ಅವರು ಅಲ್ಲೇ ಆಫೀಸ್ ಮಾಡಿದ್ದಾರೆ. ಅವರ ಏರಿಯಾದಲ್ಲೇ ದೇವೇಂದ್ರ ಫಡ್ನವೀಸ್ ಮನೆ ಇದೆ. ಹೀಗಾಗಿ ಆಗಾಗ್ಗೆ ಫಡ್ನವೀಸ್,ಜಾರಕಿಹೊಳಿ ಭೇಟಿ ಆಗ್ತಾರೆ ಎಂದು ತಿಳಿಸಿದರು.
ಮಂಡ್ಯದಲ್ಲಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ನೂರು ಕಿಟ್ ಕೊಡೋಕೆ ಸಾವಿರ ಜನ ಸೇರಿಕೊಂಡು ರಾಜಕಾರಣ ಮಾಡ್ತಾರೆ. ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಂದೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಕಾ. ಅದಕ್ಕಾಗಿ ವೇದಿಕೆ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮನ್ಮುಲ್ ಹಾಲು ನೀರು ಕೇಸ್ ಸಿಬಿಐ ತನಿಖೆಗೆ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಸಚಿವ ನಾರಾಯಣಗೌಡ, ಸ್ಥಳೀಯ ಪೊಲೀಸರ ತನಿಖೆ ಮುಗಿಯಲಿ ಅಂತ ವಿಳಂಬ ಆಗಿರಬಹುದು.ಲೋಕಲ್ ಪೊಲೀಸ್ ತನಿಖೆ ಮುಗಿದ ಮೇಲೆ ಸಿಐಡಿಗೆ ಕೊಡಬೇಕಲ್ವ. ಆಗಾಗಿ ಸಿಐಡಿ ತನಿಖೆಗೆ ಆದೇಶ ವಿಳಂಬ ಆಗಿದೆ ಎಂದು ತಿಳಿಸಿದರು.
ಕೆಆರ್ಎಸ್ ಜಲಾಶಯದಲ್ಲಿ ಬಿರುಕು ವದಂತಿ ಹಿನ್ನೆಲೆ. ಜಲಾಶಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
Key words: MLA-Muniratna- Ramesh jarakiiholi -Why not -join –Cabinet- Minister -Narayana Gowda