ಮೈಸೂರು,ಡಿಸೆಂಬರ್,20,2022(www.justkannada.in): ಮೈಸೂರು ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಗೃಹಬಳಕೆ ನೀರಿನ ಮತ್ತು ಒಳಚರಂಡಿ ಶುಲ್ಕದ ಪರಿಷ್ಕರಣೆಯನ್ನು ಕೈಬಿಡುವಂತೆ ಪಾಲಿಕೆ ಆಯುಕ್ತರಿಗೆ ಮತ್ತು ಮೇಯರ್ ಗೆ ಪತ್ರದ ಮೂಲಕ ಶಾಸಕ ಎಸ್.ಎ.ರಾಮದಾಸ್ ಮನವಿ ಮಾಡಿದರು.
ಈ ಸಂಬಂಧ ಪತ್ರ ಬರೆದಿರುವ ಶಾಸಕ ಎಸ್.ಎ ರಾಮದಾಸ್ , ಮೈಸೂರು ನಗರಕ್ಕೆ ಮೈಸೂರು ಮಹಾನಗರ ಪಾಲಿಕೆ ಪ್ರಸ್ತುತ ಕಾವೇರಿ ಮತ್ತು ಕಬಿನಿ ನದಿ ಮೂಲದಿಂದ ಪ್ರತಿದಿನ ಸುಮಾರು 300MLD ಮೇಲ್ಮೈ ನೀರನ್ನು ಸಾರ್ವಜನಿಕರ ಬಳಕೆಗೆ ವಿತರಣೆ ಮಾಡಲಾಗುತ್ತಿದ್ದು, ಇದಲ್ಲದೆ ಸುಮಾರು 1200 ಸಂಖ್ಯೆ ಕೊಳವೆಬಾವಿಗಳ ಮೂಲಕ ಸಹ 35MLD ರಷ್ಟು ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಮುಂದಿನ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗೃಹ ಬಳಕೆ ವರ್ಗದ ನೀರಿನ ಶುಲ್ಕ ಮತ್ತು ಒಳಚರಂಡಿ ಶುಲ್ಕವನ್ನು ಪರಿಷ್ಕರಿಸುವ ವಿಷಯವನ್ನು ಚರ್ಚಿಸಿ, ಅನುಮೋದನೆ ಪಡೆದು, ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿಯು ಮಾಧ್ಯಮಗಳ ಮುಖೇನ ನನ್ನ ಗಮನಕ್ಕೆ ಬಂದಿರುವುದು ಸರಿಯಷ್ಟೇ.
ಮೈಸೂರು ಮಹಾನಗರ ಪಾಲಿಕೆ 02.12.2022ರ ಕೌನ್ಸಿಲ್ ಕಾರ್ಯಸೂಚಿ ವಿಷಯ ಸಂಖ್ಯೆ : 17/42.. ರಲ್ಲಿನ ವಿಸ್ಕೃತ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲಾಗಿದ್ದು, ಪ್ರಸ್ತುತ ನೀರು ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತಿವರ್ಷ ಸರಾಸರಿ ವಿದ್ಯುತ್ ಬಿಲ್ ರೂ 49.90 ಕೋಟಿಗಳಾಗಿದ್ದು, ಇದು ನೀರು ಸರಬರಾಜು ನಿರ್ವಹಣಾ ವೆಚ್ಚದ ಶೇ. 50% ಆಗಿದೆ. ಪ್ರಸ್ತುತ ವಿದ್ಯುತ್ ಬಿಲ್ಲನ್ನು ರಾಜ್ಯ ಸರ್ಕಾರದ SFC(Electricity) ಅನುದಾನದಲ್ಲಿ ನೀಡಲಾಗುತ್ತಿದ್ದು, ಸದರಿ ವೆಚ್ಚ ಪಾಲಿಕೆಯಿಂದ ಭರಿಸುವುದಾದರೆ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕಷ್ಟಸಾಧ್ಯವಾಗುತ್ತದೆ ಎಂಬ ಅಂಶವನ್ನು ಗಮನಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು SFC(Electricity) ಅನುದಾನವನ್ನು ಕಡಿತಗೊಳಿಸುವ ಯಾವುದೇ ಚಿಂತನೆಯನ್ನು ಹೊಂದಿರದ ಕಾರಣ ದರಪರಿಷ್ಕರಣೆಯ ಮೂಲ ಉದ್ದೇಶವೇ ತರ್ಕರಹಿತವಾಗಿದೆ.
ಮೈಸೂರು ಮಹಾನಗರ ಪಾಲಿಕೆಯು ಅವಶ್ಯಕವಾಗಿರುವ ಕ್ರಮಗಳನ್ನು ಕೈಗೊಳ್ಳದೇ, ಸರಾಸರಿ ಶೇ. 60ರಷ್ಟು ನೀರು ಸರಬರಾಜು ಮತ್ತು ಒಳಚರಂಡಿ ಶುಲ್ಕವನ್ನು ಹೆಚ್ಚಿಸುತ್ತಿರುವುದು ಇದಾಗಲೇ ಪ್ರಾಮಾಣಿಕವಾಗಿ ಬಿಲ್ ಪಾವತಿಸುತ್ತಿರುವ ಬಳಕೆದಾರರಿಗೆ ಅನೈಸರ್ಗಿಕ ನ್ಯಾಯ ನೀಡಿದಂತಾಗಲಿದೆ. ಬಿಲ್ ಪಾವತಿಸುವ ಬಳಿಕೆದಾರರನ್ನು ನಿರುತ್ಸಾಹಿಗಳನ್ನಾಗಿಸುವ ಸಂಭವವಿದೆ. ಆದ್ದರಿಂದ ಎಲ್ಲ ವಿಚಾರಗಳನ್ನು ತರ್ಕಬದ್ದವಾಗಿ ಅವಲೋಕಿಸಿ ಮೈಸೂರು ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಗೃಹಬಳಕೆ ನೀರಿನ ಮತ್ತು ಒಳಚರಂಡಿ ಶುಲ್ಕದ ಪರಿಷ್ಕರಣೆಯನ್ನು ಕೈಬಿಡಬೇಕು ಎಂದು ಶಾಸಕ ಎಸ್.ಎ ರಾಮದಾಸ್ ಮನವಿ ಮಾಡಿದ್ದಾರೆ.
Key words: MLA- SA Ramdas – corporation -drop – revision – water – sewerage- charges