ಮೈಸೂರು,ಫೆಬ್ರವರಿ,8,2025 (www.justkannada.in): ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಆಪ್ ಸರ್ಕಾರವನ್ನು ದೆಹಲಿಯ ಬೇಸತ್ತು ಜನ ತಿರಸ್ಕರಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಸಂತಸ ವ್ಯಕ್ತಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ, 27 ವರ್ಷಗಳ ಸುದೀರ್ಘ ಅವಧಿಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಕಾರಣಕರ್ತರು. ಬಿಜೆಪಿ ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಪ್ರಚಾರ ಮಾಡಿತು. ಹಾಗಾಗಿ ದೆಹಲಿಯ ಜನರು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ದೆಹಲಿ ಚುನಾವಣೆಯ ತಂತ್ರಗಾರಿಕೆಯನ್ನೇ ಮುಂಬರುವ ಎಲ್ಲಾ ರಾಜ್ಯಗಳ ಚುನಾವಣೆಗೂ ಮಾಡಲಾಗುವುದು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರೂ ರಾಜೀನಾಮೆ ನೀಡಲಿಲ್ಲ. ಜೈಲಿನಿಂದಲೇ ಆಡಳಿತ ನಡೆಸುತ್ತೇನೆಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ದವಾಗಿ ನಡೆದುಕೊಂಡರು. ಆಪ್ ಸರ್ಕಾರದ ಹಲವು ಸಚಿವರು ಹಗರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದರು. ಆಪ್ ಸರ್ಕಾರದ ವ್ಯಾಪಕ ಭ್ರಷ್ಟಾಚಾರದಿಂದ ಬೇಸತ್ತ ದೆಹಲಿಯ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದರು.
ರಾಜ್ಯದಲ್ಲಿರುವುದು A1 ಆರೋಪ ಹೊತ್ತಿರುವವರ ನೇತೃತ್ವದ ಸರ್ಕಾರ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ವಿವಾದಿತ 14 ನಿವೇಶನಗಳನ್ನು ಅವರ ಪತ್ನಿ ಪಾರ್ವತಿ ಏಕೆ ಮುಡಾಕ್ಕೆ ವಾಪಸ್ ನೀಡಿದರು. ಮುಡಾ ಹಗರಣ ಸಂಬಂಧ ಮೂರು ರೀತಿಯ ತನಿಖೆ ನಡೆಯುತ್ತಿವೆ. ಈ ಹಂತದಲ್ಲಿ ಸಿಬಿಐ ತನಿಖೆಯ ಅಗತ್ಯವಿರಲಿಲ್ಲ. ಆದರೂ ದೂರುದಾರರು ಆತುರದಿಂದ ಸಿಬಿಐ ತನಿಖೆಗೆ ವಹಿಸುವಂತೆ ನ್ಯಾಯಾಲಯದ ಮೊರೆ ಹೋದರು. ದೂರುದಾರರು ಏಕೆ ಆತುರಕ್ಕೆ ಬಿದ್ದರೋ ಗೊತ್ತಿಲ್ಲ. ರಾಜ್ಯದಲ್ಲೂ ಆರೋಪ ಹೊತ್ತಿರುವವರ ನೇತೃತ್ವದ ಸರ್ಕಾರವಿದೆ. ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಶ್ರೀವತ್ಸ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಆಂತರಿಕ ಬಿಕ್ಕಟ್ಟಿನಿಂದ ಮನಸ್ಸಿಗೆ ನೋವಾಗಿದೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಮನಸ್ಸಿಗೆ ನೋವಾಗಿದೆ. ಪಕ್ಷದ ಕಾರ್ಯಕರ್ತರಿಗೂ ಬೇಸರ ತರಿಸಿದೆ. ಕೇಂದ್ರ ನಾಯಕರು ದೆಹಲಿ ಚುನಾವಣೆಯತ್ತ ಗಮನ ಹರಿಸಿದ್ದರು. ಹಾಗಾಗಿ ರಾಜ್ಯದ ವಿದ್ಯಮಾನದ ಬಗ್ಗೆ ಗಮನ ನೀಡಿರಲಿಲ್ಲ. ಸದ್ಯದಲ್ಲೇ ಎಲ್ಲಾ ನಾಯಕರನ್ನು ಒಟ್ಟಿಗೆ ಕೂರಿಸಿ ಮಾತನಾಡಲಿದ್ದಾರೆ. ಆ ಮೂಲಕ ಪಕ್ಷದ ಆಂತರಿಕ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸವಿದೆ ಎಂದು ಶಾಸಕ ಶ್ರೀವತ್ಸ ಹೇಳಿದರು.
Key words: Delhi election, AAP, BJP, power, MLA Srivatsa