ಮೈಸೂರು,ನವೆಂಬರ್,29,2024 (www.justkannada.in): ಮುಡಾ ಹಗರಣ ಸಂಬಂಧ 50:50 ಅನುಪಾತದಲ್ಲಿ ಕೊಟ್ಟಿರುವ ಮುಡಾ ಸೈಟ್ ಗಳನ್ನು ವಾಪಸ್ ಪಡೆಯಲಿ ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, 3ಅಡಿ 6 ಅಡಿ ಜಾಗ ಒಂದು ನನಗೆ ನಿಗದಿಯಾಗಿದೆ. ಮುಡಾದಲ್ಲಿ ನನ್ನ ಆಸ್ತಿ ಏನೂ ಇಲ್ಲ. ದುರಾಸೆ ಇಟ್ಟುಕೊಂಡು ನಾನು ರಾಜಕಾರಣ ಮಾಡಿಲ್ಲ. ಈಗಾಗಲೇ ಮೂರು ದಿಕ್ಕಿನಿಂದಲೂ ತನಿಖೆ ನಡೆಯುತ್ತಿದೆ. ನಾನು ಈ ಹಿಂದೆಯೇ ಹೇಳಿದ್ದೆ 50:50 ಅನುಪಾತದಲ್ಲಿ ಕೊಟ್ಟಿರುವ ಸೈಟ್ ಗಳನ್ನು ವಾಪಸ್ ಪಡೆಯಬೇಕು. ತನಿಖೆ ನಂತರ ಅರ್ಹರಿಗೆ ಗೌರವವಾಗಿ ಸೈಟ್ ಕೊಡಬೇಕು. ರಾಜಕಾರಣಿಗಳ ಮೇಲೆ ಆರೋಪ ಕೇಳಿ ಬರುತ್ತಿವೆ. ಮುಡಾದಲ್ಲಿ ನನ್ನ ಒಂದೇ ಒಂದು ಸೈಟು ಕೂಡ ಇಲ್ಲ. ಮುಂದೆ ತನಿಖೆಯಿಂದ ಏನಾಗತ್ತೆ ಗೊತ್ತಿಲ್ಲ . ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಮುಡಾದಲ್ಲಿ ನೀಡಿರುವ ಎಲ್ಲಾ ನಿವೇಶನಗಳನ್ನ ವಾಪಸ್ ನೀಡಬೇಕು. ಎಲ್ಲಾ ಸೈಟ್ ಗಳನ್ನ ಮುಟ್ಟುಗೋಲು ಹಾಕಿಕೊಳ್ಳಬೇಕು. ತನಿಖೆ ಮುಗಿದ ಬಳಿಕ ಸಮಪರ್ಕವಾಗಿದ್ದರೆ ಅವರಿಗೆ ನೀಡಲಿ ಎಂದು ಹೇಳಿದರು.
ಮುಡಾದಲ್ಲಿ ನಕ್ಷೆ ಅನುಮೋದನೆ, ನಿವೇಶನ ಬಿಡುಗಡೆ ಜವಾಬ್ದಾರಿ ಇದೆ. ನಿವೇಶನಕ್ಕೆ ಜಮೀನು ವಶಪಡಿಸಿಕೊಳ್ಳುವುದನ್ನ ಸರಿಯಾಗಿ ಮಾಡಿಲ್ಲ. ಕಂದಾಯ, ಖಾತೆ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಪಾಲಿಕೆ ವ್ಯಾಪ್ತಿಯ ದುಪ್ಪಟ್ಟು ನಿವೇಶನ ಪ್ರಾಧಿಕಾರದಿಂದ ಹಂಚಿಕೆಯಾಗಿದೆ. ಮುಡಾದ ಸಭೆಯಲ್ಲಿ ಸಿಎಂ ಪತ್ನಿ ವಿಚಾರ ಚರ್ಚೆಯಾಗಿತ್ತು. ಯಾವುದೇ ಸ್ಪಷ್ಟ ನಿಯಮಾವಳಿಗಳಿಲ್ಲ. ರೈತರ ಜಮೀನಿಗೆ 50:50 ಅಡಿಯಲ್ಲಿ ಎಷ್ಟು ದಿನಗಳಲ್ಲಿ ಕೊಡ್ತೀರಿ? ಬದಲಿಗೆ ಬೇರೆ ಕಡೆ ಕೊಡಲು ಬರುವುದಿಲ್ಲ. ಹೆಚ್ಚಿನ ಪರಿಹಾರಕ್ಕೆ ಅರ್ಜಿ ಹಾಕಬಹುದು. ಆದರೆ 50:50 ಸೈಟ್ ನೀಡಲು ಬರುವುದಿಲ್ಲ. ಆ ರೀತಿ ಆದರೆ ಪ್ರಾಧಿಕಾರ ಮುಚ್ಚಬೇಕಾಗುತ್ತದೆ. ಮುಡಾವನ್ನ ಮುಚ್ಚಿಹಾಕಿ ಎಂದು ನಾನು ಹೇಳಿರುವೆ. ಸಂಸ್ಥೆ ಮಾಡಿರುವ ಕಾರ್ಯದಿಂದ ಇಷ್ಟೆಲ್ಲ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಪತ್ನಿ ಪಾರ್ವತಿ ಅವರ ಸೈಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಸಭೆಯಲ್ಲಿ ಸಿಎಂ ಪತ್ನಿ ಅಂತ ವಿಷಯ ಬರಲಿಲ್ಲ ನನಗಾಲಿ, ಯಾರಿಗಾಗಲಿ ಸಿಎಂ ಫೋನ್ ಮಾಡಿ ಹೇಳಿರಲಿಲ್ಲ. ಆದರೆ ಅಂದಿನ ಅಧ್ಯಕ್ಷರು, ಆಯುಕ್ತರು ಪಾರ್ವತಿ ಅಂತ ಫೈಲ್ ಇಟ್ಟಿದ್ದರು. ಆ ಸಭೆಯಲ್ಲಿ ನನ್ನದು, ರಾಮದಾಸ್ ಅವರ ವಿರೋಧವಿತ್ತು. ಅದರ ವಿರೋಧದ ನಡುವೆ ಈ ಬಿಲ್ ಪಾಸ್ ಮಾಡಿದ್ರು. ನಾನು ನನ್ನ ಜನಕ್ಕೆ ಮೋಸ ಮಾಡಿಲ್ಲ. ಆ ಸಭೆಯಲ್ಲಿ ನಾವು ವಿರೋಧ ಮಾಡಿದ್ದ ಧ್ವನಿ ಸುರುಳಿ ಹೊರಬಂದಿತ್ತು ಎಂದು ತಿಳಿಸಿದರು.
ರಾಜಕಾರಣ ಮಾಡುವವರು ಬೇರೆ ವ್ಯವಹಾರ ಮಾಡಬಾರದು ಅಂತಲ್ಲ. ಎಲ್ಲವನ್ನೂ ಕ್ರಮ ಬದ್ಧವಾಗಿ ಮಾಡಬೇಕು. ಬೇನಾಮಿ ಎಂಬುದನ್ನ ನಾನು ಒಪ್ಪಲ್ಲ. ಯಾವುದೇ ಅರ್ಜಿ ಬಂದಾಗ ಮಾಡಲೇಬೇಕು ಅಂತ ಮಾಡಿಲ್ಲ. ಆದರೆ ಕ್ರಮಬದ್ಧವಾಗಿದ್ದರೆ ಮಾಡಿ ಎಂದು ಶಿಫಾರಸ್ಸು ಮಾಡಿರುವೆ. ಅದನ್ನ ಹೇಗೆ? ಯಾವಾಗ? ಯಾರ ಮೂಲಕ ಮಾಡಬೇಕು ಅಂತ ಅಧಿಕಾರಿಗಳು ಮಾಡಬೇಕು. ರಾಜಕಾರಣಿಗಳು, ವ್ಯವಸ್ಥೆ ಸೇರಿ ಜನರ ಒಳಿತಿಗಾಗಿ ಕೆಲಸ ಮಾಡಬೇಕು. ನಾನು ಒಬ್ಬರ ಮೇಲೆ ಆರೋಪ ಮಾಡಲ್ಲ. ಕಾನೂನು ಮೀರಿ ಸ್ವಾರ್ಥಕ್ಕೆ ಮಾಡಿಕೊಂಡಿದ್ದರೆ ತಪ್ಪು. ನನ್ನ ಹೆಸರಿನಲ್ಲಿ ಮುಡಾ ಸೈಟ್ ಇದ್ದರೆ ಅದು ಸರ್ಕಾರದ್ದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
Key words: MLA, Tanveer Sait, return, MUD, sites