2ನೇ ಬಾರಿ ಶೋಕಾಸ್ ನೋಟಿಸ್ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅಮಾನತು ಸಾಧ್ಯತೆ

ಬೆಂಗಳೂರು,ಫೆಬ್ರವರಿ,11,2025 (www.justkannada.in):  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಭಿನ್ನಮತ ಸಾರಿ ಕೇಂದ್ರ ಚುನಾವಣಾ ಶಿಸ್ತು ಸಮಿತಿಯಿಂದ ಎರಡು ಬಾರಿ ಶೋಕಾಸ್ ನೋಟಿಸ್ ಪಡೆದಿರುವ ಭಿನ್ನಮತೀಯ ನಾಯಕ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಪಕ್ಷದಿಂದ ಅಮಾನತು  ಮಾಡುವ ಸಾಧ್ಯತೆ ಇದೆ.

ನಿನ್ನೆ ಶಾಸಕ ಯತ್ನಾಳ್ ಗೆ  ಶೋಕಾಸ್ ನೋಟಿಸ್ ನೀಡಿರುವ  ಕೇಂದ್ರ ಚುನಾವಣಾ ಶಿಸ್ತು ಸಮಿತಿ ಮೂರು ದಿನದೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.  ಒಂದು ವೇಳೆ ಅವರು ನೀಡುವ ಉತ್ತರ ತೃಪ್ತಿಕರವಾಗದಿದ್ದರೆ,  ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಸಂಭವವಿದೆ ಎಂಬ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.  ಈ ಹಿಂದೆಯೂ ಯತ್ನಾಳ್‌ ಗೆ  ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಆಗ ಅವರು ನೀಡಿದ್ದ ಉತ್ತರ ತೃಪ್ತಿಕರವಾಗಿಲ್ಲ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ತಮ್ಮ ನಡವಳಿಕೆಯನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದ ಯತ್ನಾಳ್, ಎಂದಿನಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಅಷ್ಟೇ ಅಲ್ಲ ತಮ್ಮದೇ ಬಣ ಕಟ್ಟಿಕೊಂಡು ವಿಜಯೇಂದ್ರ ಹಠಾವೋ ಹೋರಾಟಕ್ಕೆ ಇಳಿದಿದ್ದಾರೆ. ಇದೀಗ ಯತ್ನಾಳ್ ನೋಟಿಸ್ ಗೆ ಯಾವ ಉತ್ತರ ನೀಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಎಂದಿನಂತೆ ಅವರು ಅದೇ ವಿಜಯೇಂದ್ರ, ಯಡಿಯೂರಪ್ಪ, ಕುಟುಂಬ ರಾಜಕಾರಣ, ಹೊಂದಾಣಿಕೆ ಮತ್ತಿತರ ಕ್ಷಣಿಕ ಕಾರಣಗಳನ್ನು ನೀಡಿದರೆ, ಶಿಸ್ತು ಸಮಿತಿ ಸಹಿಸುವುದಿಲ್ಲ. ಬದಲಾಗಿ ಮುಲಾಜಿಲ್ಲದೆ, ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು  ಹೇಳಲಾಗುತ್ತಿದೆ.

ಇನ್ನು ಶಾಸಕ ಯತ್ನಾಳ್ ವಿರುದ್ದ ಉಚ್ಚಾಟನೆಯಂತಹ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ, ಬಿಜೆಪಿಗೆ ಭದ್ರ ಬುನಾದಿಯಾಗಿರುವ ಪಂಚಮಸಾಲಿ ಸಮುದಾಯದ ವಿರೋಧ ಕಟ್ಟಿಕೊಂಡಂತಾಗುತ್ತದೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆ ಸಮುದಾಯ ತಿರುಗಿ ಬೀಳಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಯತ್ನಾಳ್ ಬಾಯಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮಾನತುಗೊಳಿಸುವ ಅಸ್ತ್ರ ಪ್ರಯೋಗಿಸಲು ಶಿಸ್ತು ಸಮಿತಿ ಮುಂದಾಗಿದೆ ಎನ್ನಲಾಗಿದೆ.

ಶೋಕಾಸ್ ನೋಟಿಸ್‌ ಗೆ ಯತ್ನಾಳ್ ಉತ್ತರವನ್ನು ಸಿದ್ಧಪಡಿಸಿಕೊಂಡಿದ್ದರಾದರೂ, ಕಳೆದ ಬಾರಿಯಂತೆ ನೀವು ನೀಡಿದ ಉತ್ತರವನ್ನೇ ನೀಡಬೇಡಿ. ಬದಲಿಗೆ ಸರಿಯಾದ ಸಮರ್ಥನೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ವರ್ತನೆಯನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ ಎಂದು ನೋಟಿಸ್ ನಲ್ಲಿ ಶಿಸ್ತು ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಓಂ ಪಾಠಕ್  ಎಚ್ಚರಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಬದಲಾವಣೆಗೆ ಪದೇ ಪದೇ ಪಟ್ಟು ಹಿಡಿಯುತ್ತಿರುವ ಶಾಸಕ ಯತ್ನಾಳ್ ಗೆ ಈ ಮೂಲಕ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶಾಕ್ ನೀಡಿದ್ದು, ಯತ್ನಾಳ್ ಅಮನತಾಗುತ್ತಾರೆಯೇ ಅಥವಾ ಸಮರ್ಪಕ ಉತ್ತರ ನೀಡುತ್ತಾರೆಯೇ ಕಾದು ನೋಡಬೇಕಿದೆ.

Key words:  showcase notice,  MLA, Basana Gowda Patil Yatnal, suspend