ಮೈಸೂರು,ಅಕ್ಟೋಬರ್,18,2020(www.justkannada.in): ಪ್ರವಾಹ ನಿರ್ವಹಣೆ ಸಂಬಂಧ ಸರ್ಕಾರ ವಿರುದ್ದ ಲೇವಡಿ ಮಾಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಚೆನ್ನಾಗಿ ನಿರ್ವಹಿಸಿದ್ರೆ ಯಾಕೆ ಚಾಮುಂಡೇಶ್ವರಿಯಲ್ಲಿ ಸೋಲ್ತಿದ್ರು. ಯಾಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿಲ್ಲ ಎಂದು ಪ್ರಶ್ನಿಸಿದರು.
ಜನತೆ ನಾವು ಆಡುವ ಭಾಷೆಯನ್ನೂ ಕೂಡ ಗಮನಿಸ್ತಾರೆ. ಜವಾಬ್ದಾರಿಯುತ ವಿಪಕ್ಷ ನಾಯಕರಾಗಿ ಬಳಸುವ ಪದಗಳ ಮೇಲೆ ಎಚ್ಚರಿಕೆ ಇರಬೇಕು. ವಿರೋಧ ಪಕ್ಷಗಳು ಎಷ್ಟು ಬಲವಾಗಿರುತ್ತವೆಯೋ ಸರ್ಕಾರಗಳು ಅಷ್ಟೇ ಬಲವಾಗಿರುತ್ತವೆ. ದಮ್ಮು ಇದ್ಯೆನ್ರಿ ಅವನಿಗೆ ಅನ್ನೋದು ಭಾಷೆನಾ ಅದು ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.
ಎಲ್ಲಾ ಸಚಿವರು ಕೂಡಲೇ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಬೇಕು…
ಪ್ರವಾಹದಿಂದಾಗಿ ಉತ್ತರ ಕರ್ನಾಟಕದವರ ಬದುಕು ಮೂರಾಬಟ್ಟೆ ಆಗಿದೆ. ಆ ಭಾಗದಲ್ಲಿ ಶ್ರಮ ಜೀವಿಗಳೇ ಜಾಸ್ತಿ, ಅವರನ್ನ ನೋಡಿದರೆ ಕರುಳು ಹಿಂಡುತ್ತೆ. ಸಂಬಂಧಪಟ್ಟ ಮಂತ್ರಿಗಳೇ ಹೋಗಬೇಕು ಅಂತ ಏನಿಲ್ಲ. ಎಲ್ಲಾ ಸಚಿವರು ಕೂಡಲೇ ಪ್ರವಾಹಪೀಡಿತ ಸ್ಥಳಗಳಿಗೆ ತೆರಳಬೇಕು. ಸಿಎಂ ಕೂಡಲೇ ಎಲ್ಲಾ ಇಲಾಖೆ ಅಧಿಕಾರಿಗಳನ್ನ ನೆರೆ ಪ್ರದೇಶಗಳಿಗೆ ನಿಯೋಜಿಸಬೇಕು. ಶಾಸಕರು, ಸಚಿವರು ನೆಪ ಹೇಳದೆ ಹೋಗದಂತಿರಬಾರದು ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.
Key words: MLC- H. Vishwanath –former cm-Siddaramaiah-government – flood management.