ಮೈಸೂರು,ಮೇ,17,2022(www.justkannada.in): ವಿಧಾನ ಪರಿಷತ್ ಚುನಾವಣೆಗೆ ಕೀಲಾರ ಜಯರಾಂಗೆ ಟಿಕೆಟ್ ನೀಡದ ಹಿನ್ನೆಲೆ ಅಸಮಾಧಾನಗೊಂಡಿರುವ ಜೆಡಿಎಸ್ ಎಂಎಲ್ ಸಿ ಮರಿತಿಬ್ಬೇಗೌಡ ಪಕ್ಷೆ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನಪರಿಷತ್ ಸದಸ್ಯ ಮರೀತಿಬ್ಬೇಗೌಡ ನಾನು ಪಕ್ಷ ಬಿಡುವುದು ಖಚಿತ, ಮುಂದೆ ಜೆಡಿಎಸ್ ನಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಜೆಡಿಎಸ್ ಕಾರ್ಯಕರ್ತರಾಗಿ ದುಡಿದ ಜಯರಾಂಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೊಡಲಿಲ್ಲ. ಜಯರಾಂ ಬಳಿ ಹಣ ಇಲ್ಲ ಎಂದು ಟಿಕೆಟ್ ನಿರಾಕರಿಸಲಾಗಿತ್ತು. ಜೆಡಿಎಸ್ ಕಾರ್ಯಕರ್ತನಲ್ಲದ ಹಣ ಇರುವ ವ್ಯಕ್ತಿಗೆ ಟಿಕೆಟ್ ಕೊಡಲಾಗಿದೆ.
ನಾನು ಹೇಳಿದ್ದನ್ನು ಎಚ್.ಡಿ. ಕುಮಾರಸ್ವಾಮಿ ತಿರುಚಿದ್ದಾರೆ. ನಾನು ದುಡ್ಡು ತೆಗೆದು ಕೊಂಡು ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಹಣ ಇರುವವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ದುಡ್ಡಿಗಾಗಿ ಟಿಕೆಟ್ ಮಾರಿ ಕೊಂಡಿದ್ದಾರೆ ಎಂದು ನಾನು ಹೇಳಿಯೇ ಇಲ್ಲ. ಎಚ್.ಡಿ ಕುಮಾರಸ್ವಾಮಿ ನನ್ನ ಮಾತು ತಿರುಚಿದ್ದಾರೆ. ಈ ಹಿಂದೆ ಪ್ರಜ್ವಲ್ ರೇವಣ್ಣ, ಜೆಡಿಎಸ್ ನಲ್ಲಿ ಸೂಟಕೇಸ್ ಇದ್ದವರಿಗೆ ಮೊದಲ ಸ್ಥಾನ ಎಂದು ಹೇಳಿದ್ದರು. ಅವತ್ತು ಎಚ್.ಡಿಕೆ ಏನೂ ಮಾತಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಿಕೆಟ್ ಕೊಟ್ಟು ನನ್ನ ಸೋಲಿಸುವ ಯತ್ನವನ್ನೂ ಮಾಡಿದ್ರು. ಆದರೂ ನಾನು ಗೆದ್ದೆ
ನನಗೆ ಎರಡು ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿ ಫಾರಂ ಕೊಟ್ಟರು. ಆದರೆ, ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಆ ಚುನಾವಣೆಗಳಲ್ಲಿ ನನ್ನ ಪರವಾಗಿ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ. ಟಿಕೆಟ್ ಕೊಟ್ಟು ನನ್ನ ಸೋಲಿಸುವ ಯತ್ನವನೂ ಜೆಡಿಎಸ್ ವರಿಷ್ಠರು ಮಾಡಿದರು. ಆದರೂ ನಾನು ಗೆದ್ದೆ ಪದವೀಧರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಟಿಕೆಟ್ ಕೊಟ್ಟಿರೋ ರಾಮು ಗೆ ಯಾವ ಮಾನದಂಡದಲ್ಲಿ ಟಿಕೆಟ್ ಕೊಟ್ಟಿರಿ.? ಜೆಡಿಎಸ್ ನಲ್ಲಿ ದುಡ್ಡೆ ಮಾನದಂಡನಾ.? ಪಕ್ಷಕ್ಕಾಗಿ ದುಡಿಮೆ ಮಾಡಿದ್ದು ಮಾನದಂಡ ಅಲ್ವಾ.? ಜಯರಾಂ 30 ವರ್ಷದಿಂದ ಜೆಡಿಎಸ್ ಗೆ ದುಡಿದಿದ್ದಾರೆ. ಯಾವ ಚುನಾವಣೆಯಲ್ಲಿ ನನಗೆ ಎಚ್.ಡಿಕೆ ಎಷ್ಟು ಹಣ ಕೊಟ್ಟಿದ್ದಾರೆ.ಅದನ್ನು ಬಹಿರಂಗವಾಗಿ ಹೇಳಲಿ. ನನಗೆ ಮೂರು ವರ್ಷ ವಿಧಾನ ಪರಿಷತ್ ನ ಉಪಸಭಾಪತಿಯಾಗಿ ಜೆಡಿಎಸ್ ಮಾಡಿದೆ. ನನಗೆ ವಾಸ ಮಾಡಲು ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ. ಇಲ್ಲಿ ಮನೆ ಕಟ್ಟೋಕೆ ಶುರು ಮಾಡಿ ಮೂರು ವರ್ಷವಾಯ್ತು. ಇನ್ನೂ ನನ್ನ ಕೈಯಲ್ಲಿ ಮನೆ ಮುಗಿಸಲು ಆಗಿಲ್ಲ. ನನ್ನ ಬದುಕು ತೆರೆದ ಪುಸ್ತಕ. ನನ್ನ ಬಗ್ಗೆ ಅನುಮಾನ ಬರುವ ರೀತಿ ಯಾಕೆ ಮಾತಾಡುತ್ತಿರಿ.? ಉದ್ಯಮಿಗಳನ್ನು ಜೆಡಿಎಸ್ ನಿಂದ ವಿಧಾನಪರಿಷತ್ ಕಳಿಸಲಾಗಿದೆ. ಇದುವರೆಗೂ ರೈತನನ್ನು, ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ವಿಧಾನ ಪರಿಷತ್ ಗೆ ಜೆಡಿಎಸ್ ನಿಂದ ಕಳಿಸಲಿಲ್ಲಾ ಯಾಕೆ.? ಎಂದು ಖಾರವಾಗಿ ಪ್ರಶ್ನಿಸಿದರು.
ಜೆಡಿಎಸ್ ಬಿಟ್ಟವರು ಗುಡಿಸಲಲ್ಲಿ ಇದ್ದಾರಾ.? ನೀವು ಮಾತ್ರ ವೆಸ್ಡ್ ಎಂಡ್ ಹೋಟೆಲ್ ನಲ್ಲಿ ಇದ್ದಿರಾ ಅಲ್ವಾ.?
ಹಾಗೆಯೇ ಹೆಚ್.ಡಿಕೆ ವಿರುದ್ಧ ವಾಗ್ಬಾಣ ಮುಂದುವರೆಸಿದ ಮರೀತಿಬ್ಬೇಗೌಡ, ಜೆಡಿಎಸ್ ಬಿಟ್ಟವರೆಲ್ಲಾ ಬೀದಿ ಪಾಲಾಗಿದ್ದಾರೆ ಎಂದು ಎಚ್ಡಿಕೆ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿನ ಬಿ.ಎಲ್. ಶಂಕರ್ ಬಗ್ಗೆ ಎಚ್ಡಿಕೆ ಬಹಳ ಕೀಳಾಗಿ ಮಾತಾಡಿದ್ದಾರೆ. ಬಿ.ಎಲ್. ಶಂಕರ್ ಬಗ್ಗೆ ಮಾತಾಡುವ ಯೋಗ್ಯತೆ ಹೆಚ್.ಡಿ.ಕುಮಾರಸ್ವಾಮಿ ಗೆ ಇಲ್ಲ. ಜೆಡಿಎಸ್ ಬಿಟ್ಟವರು ಗುಡಿಸಲಲ್ಲಿ ಇದ್ದಾರಾ.? ನೀವು ಮಾತ್ರ ವೆಸ್ಡ್ ಎಂಡ್ ಹೋಟೆಲ್ ನಲ್ಲಿ ಇದ್ದಿರಾ ಅಲ್ವಾ.? ಪಕ್ಷ ಕಟ್ಟಿದವರ ಬಗ್ಗೆ ಕೀಳಾಗಿ ಮಾತಾಡಬೇಡಿ. ನಾಯಕರು ಯಾಕೆ ಜೆಡಿಎಸ್ ಬಿಡುತ್ತಿದ್ದಾರೆ ಅಂತಾ ಹೆಚ್.ಡಿಕೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಅಧಿಕಾರಕ್ಕೆ ಬಂದಾಗ ಯಾವತ್ತೂ ಕಾರ್ಯಕರ್ತರ ಬಗ್ಗೆ ಹೆಚ್ಡಿಕೆ ಗಮನಹರಿಸಲಿಲ್ಲ ಎಂದು ಆರೋಪಿಸಿದರು.
ಗದ್ಗದಿತರಾಗಿ ಮಾತನಾಡಿದ ಮರಿತಿಬ್ಬೇಗೌಡ.
ಜಯರಾಮ್ ನಿಮ್ಮ ಬಳಿ ಟಿಕೆಟ್ ಕೇಳಿದ್ದರು ಹಣ ಕೇಳಿಲ್ಲ. ಡಾ.ಅನ್ನದಾನಿಗೆ ಮಾಡಿದ ಕೆಲಸ ಕೀಲಾರ ಜಯರಾಮ್ ಅವರಿಗೂ ಮಾಡಬಹುದಿತ್ತು. ನನಗೆ ಯಾವ ಚುನಾವಣೆಗೆ ಹಣ ಕೊಟ್ಟಿದ್ದಾರೆ ಬಹಿರಂಗಪಡಿಸಲಿ. ನನಗೂ ದೇವರ ಮೇಲೆ ನಂಬಿಕೆ ಇದೆ. ಇದನ್ನು ನಾನು ಸ್ವಾಗತಿಸುತ್ತೇನೆ. ತಾಯಿ ಚಾಮುಂಡೇಶ್ವರಿ ಪಾದಕ್ಕೆ ಹಾಕಿರುವುದಕ್ಕೆ ಸ್ವಾಗತ. ನಾನು ಪಕ್ಷದಲ್ಲಿದ್ದೂ ಎಂದೂ ದ್ರೋಹ ಮಾಡಿಲ್ಲ. ಪಕ್ಷದ ವರಿಷ್ಠರು ನನ್ನ ಬಗ್ಗೆ ಈ ರೀತಿ ಹೇಳಿರುವುದು ನೋವು ತಂದಿದೆ ಎಂದು ಮರಿತಿಬ್ಬೇಗೌಡ ಗದ್ಗದಿತರಾದರು.
ಸಿದ್ದರಾಮಯ್ಯ, ದೇಶಪಾಂಡೆ, ಸೇರಿ ಅನೇಕರು ಪಕ್ಷ ಬಿಟ್ಟರು. ಅವರೆಲ್ಲಾ ಪುಟ್ ಪಾತ್ ಆಗಿದ್ದಾರಾ ?
ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆದ ನಂತರ ಅನೇಕ ನಾಯಕರು ಪಕ್ಷ ತೊರೆದಿದ್ದಾರೆ. ಈ ಬಗ್ಗೆ ಒಂದು ಸಭೆ ನಡೆಸಿಲ್ಲ. ಹೋದವರೆಲ್ಲಾ ಹೋಗಲಿ ಪುಟ್ ಪಾತ್ ಅಂತಾರೆ. ಸಿದ್ದರಾಮಯ್ಯ, ದೇಶಪಾಂಡೆ, ಸೇರಿ ಅನೇಕರು ಪಕ್ಷ ಬಿಟ್ಟರು. ಅವರೆಲ್ಲಾ ಪುಟ್ ಪಾತ್ ಆಗಿದ್ದಾರಾ ? ನಂಜನಗೂಡು ದೇವಸ್ಥಾನದ ಮುಂದೆ ಭಿಕ್ಷಾ ಪಾತ್ರೆ ಹಿಡಿದಿದ್ದಾರಾ ? ಎಂದು ಆಕ್ರೋಶ ವ್ಯಕ್ತಪಡಿಸಿದ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸ್ವಾಭಿಮಾನ ಬಿಟ್ಟು ಗುಲಾಮನಾಗಿ ಕೆಲಸ ಮಾಡಲು ನಾನು ಸಿದ್ದನಿಲ್ಲ. ನಾನು ಬೇರೆ ಪಕ್ಷಕ್ಕೆ ಹೋಗಲು ಸಿದ್ದನಿಲ್ಲ. ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ನಾನು ಇಲ್ಲ. ನಾನು ಪಕ್ಷ ಬಿಡುವುದು ಖಚಿತ. ನಾನು ಮುಂದೆ ಜೆಡಿಎಸ್ ಪಕ್ಷದಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರು.
ನಾನು ಈ ಪದವೀಧರರ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ.
ಶಿವನ ಆಣೆಯಾಗಿ ಕೀಲಾರ ಜಯರಾಮ್ ಗೆ ಟಿಕೆಟ್ ಕೊಡುತ್ತೇನೆ ಅಂದಿದ್ದರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಹೇಳಿದ್ದರು. ದೇವೇಗೌಡರ ಮಾತಿಗೆ ಪಕ್ಷದಲ್ಲಿ ಬೆಲೆ ಇಲ್ಲ. ಕುಮಾರಸ್ವಾಮಿಗೆ ನಾಯಕತ್ವ ನೀಡಿದ ನಂತರ ಸೊರಗಿದೆ. ಕೀಲಾರ ಜಯರಾಮ್ ಅವರನ್ನು ಎಂಎಲ್ಸಿ ಮಾಡಿದರು ಪಕ್ಷದಲ್ಲಿ ಉಳಿಯುವುದಿಲ್ಲ. ನಾನು ಈ ಪದವೀಧರರ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ. ಜೆಡಿಎಸ್ ಅಭ್ಯರ್ಥಿ ರಾಮು ಪರ ಮತ ಕೇಳುವುದಿಲ್ಲ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸ್ಪಷ್ಟನೆ ನೀಡಿದರು.
Key words: MLC- Marithibbegowda – quit –JDS-mysore