ರಾಜ್ಯದ ಆರ್ಥಿಕ ಸ್ಥಿತಿ ಆಧೋಗತಿ…! : ಎಂಎಲ್ಸಿ ವಿಶ್ವನಾಥ್

ಮೈಸೂರು,ಜನವರಿ,2,2025 (www.justkannada.in): ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿ ಪರಿಸ್ಥಿತಿಯಲ್ಲಿದೆ. ಸರ್ಕಾರದಲ್ಲಿ ಸರಿಯಾದ ಹಿಡಿತ ಇಲ್ಲ. ಹುಚ್ಚು ಹುಚ್ಚಾಗಿ ಖರ್ಚು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ , ಮೊದಲಿಗೆ ನಟ ಶಿವರಾಜ್ ಕುಮಾರ್ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದ ಆಶಿಸಿದರು.

ಇವತ್ತು ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿ ಪರಿಸ್ಥಿತಿಯಲ್ಲಿದೆ. ಆಡಳಿತದಲ್ಲಿ ಬಿಗಿ ಇಲ್ಲ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪ ಅವರ ಜಗಳ, ಬೀದಿ ರಂಪಾಟಕ್ಕೆ ಕ್ರಮ ತೆಗೆದುಕೊಳ್ಳಲಿಕ್ಕೆ ಆಗಿಲ್ಲ ನಿಮಗೆ. ಯಾವ ರೀತಿಯ ಆಡಳಿತ ಕೊಡುತ್ತಾ ಇದ್ದೀರಾ.? ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತ ಸಿಎಂ ಸಿದ್ದರಾಮಯ್ಯ ಒಂದು ಶ್ವೇತ ಪತ್ರ ಹೊರಡಿಸಬೇಕು ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಿನ್ಸಸ್ ರಸ್ತೆ ಬದಲಾವಣೆ ವಿಚಾರಕ್ಕೆ ಆಕ್ಷೇಪ

ಪ್ರಿನ್ಸಸ್ ರಸ್ತೆ ಬದಲಾವಣೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್,  ಪ್ರಿನ್ಸಸ್ ಅಂತ ಏನಿದೆ ಅದೇ ಹೆಸರು ಇರಲಿ. ಅದಕ್ಕೆ ಎಲ್ಲಾ ರೀತಿಯ ದಾಖಲೆಗಳಿವೆ. ಅದನ್ನ ಬಿಟ್ಟು ನಿಮ್ಮ ಹೆಸರನ್ನ ಇಡಲಿಕ್ಕೆ ಹೋಗಿ. ನಿಮ್ಮ ಬೆಂಬಲಿಗರು ನಿಮ್ಮ ಹೆಸರನ್ನ ಕೆಡಿಸಲಿಕ್ಕೆ ಹೊರಟಿದ್ದಾರೆ. ಇದು ಬೇಡ ಸಿದ್ದರಾಮಯ್ಯನವರೇ.  ನಿಮಗೆ ಜನ ಎಲ್ಲ ರೀತಿಯ ಅಧಿಕಾರ ಕೊಟ್ಟಿದ್ದಾರೆ, ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ಈ ವಿಚಾರ ಇಲ್ಲಿಗೆ ಬಿಡಿ ಎಂದು ವಾಗ್ದಾಳಿ ನಡೆಸಿದರು.

ಚಳಿಗಾಲದ ಅಧಿವೇಶನವೂ ಕೂಡ ಕೆಟ್ಟದಾಗಿ ಮುಗಿದಿದೆ. ವಿಧಾನ ಮಂಡಲದ ಸಂಪ್ರದಾಯ ಮುರಿಯುವಂತಹ ಕೆಲಸವೇ ಆಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಎಲ್ಲಾ ಮುಗಿದ ಅಧ್ಯಾಯ ಎಂದಿದ್ದಾರೆ. ಆದರೂ ಪೊಲೀಸರು ಮಹಜರು ಮಾಡುವುದು ಸರಿಯಲ್ಲ. ಸಿ.ಟಿ ರವಿ ಬಂಧನ ಮಾಡಿದ್ದು ಕೂಡ ಸರಿಯಲ್ಲ. ಬೆಳಗಾವಿ ಅಧಿವೇಶನ ಕೆಟ್ಟ ರೀತಿಯಲ್ಲಿ ಅಂತ್ಯವಾಯಿತು. ರಾಜ್ಯದ ‌ಆಡಳಿತ, ಅಭಿವೃದ್ಧಿ ಬಗ್ಗೆ ಯಾರು ಕೂಡ ತಲೆ‌ ಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದ ಪರಿಸ್ಥಿತಿ ಅಧೋಗತಿಯಾಗುತ್ತಿದೆ. ಇನ್ನು ಮುಂದಾದರೂ ಈ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಹೆಚ್.ವಿಶ್ವನಾಥ್ ಹೇಳಿದರು.

Key words: state, economic condition, MLC Vishwanath