ಮೈಸೂರು,ಸೆಪ್ಟಂಬರ್,17,2022(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಕೆ ಎಸ್ ಶಿವರಾಂ ನೇತೃತ್ವದಲ್ಲಿ ಮೈಸೂರು ನಗರದ ಬಡಾವಣೆಗಳಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ಬಿಜೆಪಿ ಜನಸ್ಪಂದನ ರಸ್ತೆ ಎಂದು ಮರುನಾಮಕರಣ ಮಾಡುವ ಮೂಲಕ ಅಣಕು ಧರಣಿ, ಏರ್ಪಡಿಸಲಾಗಿತ್ತು.
ಧರಣಿಯ ವೇಳೆ ಮಾತನಾಡಿದ ಪ್ರತಿಭಟನಾಕಾರರು ಮೈಸೂರು ಗುಂಡಿಗಳ ನಗರವಾಗಿ ಮಾರ್ಪಟ್ಟಿದ್ದು ಇದು ಆತಂಕಕಾರಿಯಾದ ವಿಚಾರವಾಗಿದೆ. ಮೈಸೂರು ನಗರದ ಬಡಾವಣೆಯ ರಸ್ತೆಗಳು ಭಾಗಶಃ ಹಾನಿಯಾಗಿದೆ. ಅಥವಾ ಗುಂಡಿ ಬಿದ್ದಿವೆ. ವರ್ಷಗಳೇ ಕಳೆದರೂ ಮೈಸೂರು ನಗರದ ರಸ್ತೆಗಳನ್ನು ಸರ್ಕಾರ ಮತ್ತು ಮೈಸೂರು ನಗರ ಪಾಲಿಕೆ ಸರಿಪಡಿಸಿಲ್ಲ.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೈಸೂರು ನಗರದ ರಸ್ತೆಗಳನ್ನು ಸಿಂಗಾಪುರದ ರೀತಿ ರಸ್ತೆಗಳನ್ನಾಗಿ ಮಾಡುವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಇಂದು ಮೈಸೂರುನ್ನು ಸಿಂಗಾಪುರವನ್ನಾಗಿ ಮಾಡುವುದಿರಲಿ, ಮಂಗಾಪುರವಾಗಿ ಮಾಡದೇ ಇದ್ದರೆ ಸಾಕು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೈಸೂರು ನಗರದಲ್ಲಿನ ರಸ್ತೆಗಳಿಗೆ ಹೆಚ್ಚು ಅನುದಾನ ನೀಡಿ ಮೈಸೂರು ನಗರವನ್ನು ಸುಂದರಗೊಳಿಸಿದ್ದರು. ಆದರೆ ಇಂದು ಬಿಜೆಪಿ ನೇತೃತ್ವದ ಸರ್ಕಾರ ಮೂರುವರೆ ವರ್ಷಗಳ ಆಡಳಿತದಲ್ಲಿ ಮೈಸೂರು ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಸುಮಾರು ಅಪಘಾತಗಳು ಸಂಭವಿಸಿವೆ. ಬಿಜೆಪಿಗೆ ಮತ ನೀಡಿದ ಮತದಾರ ಈಗ ಪರಿತಪಿಸುವಂತಾಗಿದೆ. ದಸರಾ ಮಹೋತ್ಸವದ ಸಂದರ್ಭದಲ್ಲಿ ರಸ್ತೆಗಳು ಹದಗೆಟ್ಟಿರುವುದು ಹಾಗೂ ಅದನ್ನು ಸರಿಪಡಿಸದೇ ಇರುವುದು ತೀವ್ರ ಖಂಡನೀಯ, ದೇಶ ವಿದೇಶ ಗಣ್ಯರು ನಗರಕ್ಕೆ, ಈ ಸಂದರ್ಭದಲ್ಲಿ ಭೇಟಿ ನೀಡುತ್ತಾರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಘನತೆಗೆ ಕುಂದುಂಟಾಗುವ ಸಂದರ್ಭ ಬಂದೊದಗಿದೆ. ಅಲ್ಲದೇ ರಾಷ್ಟ್ರಪತಿಗಳು ಕೂಡ ಈ ಬಾರಿಯ ದಸರಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಮೈಸೂರು ನಗರದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ರಾಜ್ಯ ಅತಿಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ನಾಗಭೂಷಣ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷರಾದ ಯೋಗೇಶ್ ಉಪ್ಪಾರ್, ಮುಖಂಡರಾದ ಮಹೇಂದ್ರ ಕಾಗಿನೆಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Mock- protests – Mysore – potholed- roads – ‘BJP Janaspandan Road’.