ಬೆಂಗಳೂರು, ಜುಲೈ,1, 2021 (www.justkannada.in): ಕರ್ನಾಟಕ ಸರ್ಕಾರ ಬಹಳ ಬೇಗ ಮಾದರಿ ಬಾಡಿಗೆ ಕಾಯ್ದೆಯನ್ನು (Model Tenancy Act) ಅಳವಡಿಸಿಕೊಳ್ಳಲಿದ್ದು, ಇದರಿಂದ ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ನೀಡುವ ಹಾಗೂ ಪಡೆಯುವ ನಿಯಮಗಳು ಬದಲಾಗಲಿವೆ.
ಪ್ರಸ್ತುತ ಬೆಂಗಳೂರಿನಲ್ಲಿ ಬಹುತೇಕ ಮನೆ ಮಾಲೀಕರು ಬಾಡಿಗೆದಾರರಿಂದ 5ರಿಂದ 10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯುವ ವಾಡಿಕೆ ಬೆಳೆಸಿಕೊಂಡಿದ್ದಾರೆ, ಆದರೆ ಈ ಹೊಸ ಕಾನೂನು ಅನುಷ್ಠಾನದಿಂದ ಇನ್ನು ಮುಂದೆ ಮಾಲೀಕರು ಕೇವಲ ಎರಡು ತಿಂಗಳ ಮುಂಗಡ ಮಾತ್ರ ತೆಗೆದುಕೊಳ್ಳಬಹುದು.
ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಅಭ್ಯಸಿಸುತ್ತಿರುವ ಬೆಂಗಳೂರಿನ ವಕೀಲರಾದ ಇಂದ್ರ ಧನುಷ್ ಎಂ.ಎ. ಅವರ ಪ್ರಕಾರ, “ಪ್ರಸ್ತುತ ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ, 1999 ಜಾರಿಯಲ್ಲಿದ್ದರೂ ಸಹ ಬಹುಪಾಲು ಮನೆಗಳ ಮಾಲೀಕರು ಹಾಗೂ ಬಾಡಿಗೆದಾರರು ಇಬ್ಬರಿಂದಲೂ ನಗರ ನಿಯಮಗಳ ಉಲ್ಲಂಘನೆಯಾಗುತ್ತಿದೆ.”
“ಅನೇಕರು ತಮ್ಮ ಪ್ಯಾನ್ ಕಾರ್ಡ್ ಅನ್ನು ನೀಡುವುದಿಲ್ಲ ಅಥವಾ ಲಿಖಿತ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಆದರೆ ಈ ಹೊಸ ಕಾನೂನು ಜಾರಿಯಾದರೆ ಲಿಖಿತ ಒಪ್ಪಂದ ಮಾಡಿಕೊಳ್ಳುವುದು ಮಾಲೀಕರು ಹಾಗೂ ಬಾಡಿಗೆದಾರರು ಇಬ್ಬರಿಗೂ ಕಡ್ಡಾಯವಾಗಲಿದೆ,” ಎನ್ನುತ್ತಾರೆ.
ಒಂದು ವೇಳೆ ಮಾಲೀಕರು ಬಾಡಿಗೆದಾರರಿಗೆ ಮುಂಗಡ ಹಣ ವಾಪಸ್ ನೀಡದಿದ್ದರೆ, ಅದಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಇದರಿಂದ ಮಾಲೀಕರು ಮುಂಗಡ ರೂಪದಲ್ಲಿ ತೆಗೆದುಕೊಂಡಿರುವ ಹಣವನ್ನು ಹಿಂದುರಿಗಸಲೇ ಬೇಕಾಗುತ್ತದೆ ಹಾಗೂ ವ್ಯಾಜ್ಯಗಳು ಬೇಗ ಇತ್ಯರ್ಥವಾಗುತ್ತದೆ.
“ಜೊತೆಗೆ ಹೊಸ ಕಾನೂನು, ಒಪ್ಪಂದದ ಪ್ರಕಾರ ಮಾಡಿಕೊಂಡಿರುವ ಅವಧಿಗಿಂತ ಹೆಚ್ಚಿನ ಅವಧಿಯವರೆಗೆ ಮುಂದುವರೆದರೆ ಅವರನ್ನು ಹೊರಗೆ ಕಳುಹಿಸಲು ನೆರವಾಗುತ್ತದೆ. “ಪೊಲೀಸರಿಂದ ಎಚ್ಚರಿಕೆ ನೀಡಿದರೂ ಸಹ ಕೆಲವು ಬಾಡಿಗೆದಾರರು ಮನೆ ಬಿಡಲು ನಿರಾಕರಿಸುವ ಪ್ರಕರಣಗಳಿವೆ. ಬಾಡಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಹಾಗೂ ಮನೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ ಬಾಡಿಗೆದಾರರನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಹೊರಗಟ್ಟಲು ಆಗುವುದಿಲ್ಲ ಎಂದು ನ್ಯಾಯಾಲಯದ ಹಲವು ತೀರ್ಪುಗಳಿವೆ. ಈ ಹೊಸ ಕಾನೂನು ಇಂತಹ ವಿವಾದಗಳನ್ನು ನಿಭಾಯಿಸುತ್ತದೆ,” ಎನ್ನುತ್ತಾರೆ.
ಬೆಂಗಳೂರು ಬಾಡಿಗೆದಾರರ ಸಂಘದ ಸ್ಥಾಪಕರಾದ ವಕೀಲ ವಿನಯ್ ಮಿಶ್ರಾ ಅವರ ಪ್ರಕಾರ, ಅನೇಕ ಮನೆಗಳ ಮಾಲೀಕರು ಬಾಡಿಗೆದಾರರು ಮನೆ ಬಿಡುವಾಗ ಮುಂಗಡ ಹಣದಲ್ಲಿ ಬಹಳ ದೊಡ್ಡ ಪ್ರಮಾಣದ ಮೊತ್ತವನ್ನು ಹಿಡಿದುಕೊಳ್ಳುವ ವಾಡಿಕೆ ಇದೆ. ಜೊತೆಗೆ ಒಂದು ತಿಂಗಳ ಬಾಡಿಗೆಯನ್ನು damages ಹೆಸರಿನಲ್ಲಿ ಮುರಿದುಕೊಳ್ಳುತ್ತಾರೆ. ಇನ್ನೂ ಕೆಲವರು ಈ ರೀತಿ ಕಡಿತಗೊಳಿಸಿದ ನಂತರವೂ ಸಹ ಮುಂಗಡ ಹಣವನ್ನು ನೀಡಲು ನಿರಾಕರಿಸುತ್ತಾರೆ,” ಎನ್ನುತ್ತಾರೆ.
ಆದರೆ ಈ ಹೊಸ ಕಾನೂನಿನಡಿ ಹಲವು ಲಾಭಗಳಿವೆ. “ಬಾಡಿಗೆದಾರರು ಈಗಿರುವಂತೆ ದೊಡ್ಡ ಮೊತ್ತವನ್ನು ಕಳೆದುಕೊಳ್ಳುವುದಿಲ್ಲ. ಒಂದು ವೇಳೆ ಬಾಡಿಗೆದಾರರು ಮನೆ ಬಿಡಲು ನಿರಾಕರಿಸಿದರೆ, ಮೊದಲ ತಿಂಗಳು ಬಾಡಿಗೆ ಮೊತ್ತ ದ್ವಿಗುಣಗೊಳ್ಳುತ್ತದೆ ಹಾಗೂ ಅದೇ ರೀತಿ ಮುಂದುವರೆದರೆ ಅದು ನಾಲ್ಕು ಪಟ್ಟು ಹೆಚ್ಚಾಗಬಹುದು.
ಏಕುಮುಖ ದೃಷ್ಟಿಕೋನ
ರೆಂಟಲ್ ಹೌಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕರು ಹಾಗೂ ರೆಂಟಲ್ ಹೌಸಿಂಗ್ ಕಂಪನಿ ಜೆಸ್ಚರ್ನ ಸ್ಥಾಪಕರೂ ಆದ ಶ್ರೀರಾಂ ಚಿಟ್ಟೂರಿ ಅವರ ಪ್ರಕಾರ, ಎಲ್ಲರಿಗೂ ವಸತಿಯನ್ನು ಖಾತ್ರಿಪಡಿಸುವುದು ಈ ಮಾಡೆಲ್ ಟೆನೆನ್ಸಿ ಆ್ಯಕ್ಟ್ ನ ಉದ್ದೇಶವಾಗಿದೆ.
“ಈವರೆಗೆ ಎಲ್ಲರಿಗೂ ವಸತಿ ಎನ್ನುವುದರ ಅರ್ಥ ಕೇವಲ ಮಾಲೀಕತ್ವಕ್ಕೆ ಸೀಮಿತವಾಗಿತ್ತು, ಅದರಿಂದಲೇ ಬಾಡಿಗೆ ಮನೆಯ ಉದ್ದೇಶ ಪರಿಪೂರ್ಣವಾಗಿರಲಿಲ್ಲ ಹಾಗೂ ಸರಿಯಾಗಿ ರಚಿತವಾಗಿರಲಿಲ್ಲ, ಯಾವುದೇ ಸರಿಯಾದ ದಾಖಲೆಗಳ ನಿರ್ವಹಣೆಯೂ ಇರಲಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ವಸತಿ ಬಾಡಿಗೆ ಪದ್ಧತಿಯನ್ನು ಜಾರಿಗೊಳಿಸುತ್ತಿರುವುದು ಪ್ರಶಂಸನೀಯ,” ಎನ್ನುತ್ತಾರೆ ಶ್ರೀರಾಂ. ಈ ಹಿಂದೆ ಬಾಡಿಗೆ ವಿವಾದಗಳು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಗಳಿಗೆ ಹೋಗುತ್ತಿದ್ದವು, ಹಾಗೂ ಅದನ್ನು ಇತ್ಯರ್ಥಪಡಿಸುವ ಅವಧಿ ಬಹಳ ದಿನಗಳೇ ತೆಗೆದುಕೊಳ್ಳುತಿತ್ತು. ಆದರೆ ಈಗ ಹೊಸ ಬಾಡಿಗೆ ನ್ಯಾಯಾಲಯಗಳ ರಚನೆಯಿಂದಾಗಿ ಪ್ರಕರಣಗಳ ಇತ್ಯರ್ಥ ವೇಗಗೊಳ್ಳಲಿದೆ,” ಎನ್ನುತ್ತಾರೆ.
ಕಾಯ್ದೆಯಲ್ಲಿ ಏನಿದೆ?
ಲಿಖಿತ ಒಪ್ಪಂದ ಕಡ್ಡಾಯ. ಅದನ್ನು ಜಿಲ್ಲಾ ಬಾಡಿಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಏಕರೂಪದ ಭದ್ರತಾ ಠೇವಣಿಗಳನ್ನು ಪ್ರೋತ್ಸಾಹಿಸಲಾಗಿದೆ: ವಸತಿ ಕಟ್ಟಡಗಳಿಗೆ ಎರಡು ತಿಂಗಳ ಬಾಡಿಗೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಆರು ತಿಂಗಳ ಬಾಡಿಗೆ ಮುಂಗಡ
ಆಸ್ತಿ ನಿರ್ವಹಣೆಗಾಗಿ ಮಾಲೀಕ ಹಾಗೂ ಬಾಡಿಗೆದಾರರ ನಡುವೆ ಜವಾಬ್ದಾರಿಗಳನ್ನು ವಿಭಜಿಸಲಾಗಿದೆ. ಒಂದು ವೇಳೆ ಬಾಡಿಗೆದಾರರು ಬಾಡಿಗೆ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ತೊಂದರೆ ನೀಡಿದರೆ ಮಾಲೀಕರರು ಬಾಡಿಗೆ ನ್ಯಾಯಾಲಯದ ಮೊರೆ ಹೋಗಬಹುದು.
ಮಾಲೀಕರು ನೀರು, ವಿದ್ಯುತ್ ಸರಬರಾಜುಗಳಂತಹ ಅಗತ್ಯ ಸೇವೆಗಳನ್ನು ಬಾಡಿಗೆದಾರಿಗೆ ತಡೆಹಿಡಿಯುವಂತಿಲ್ಲ. ಒಪ್ಪಂದದಲ್ಲಿ ನಮೂದಿಸಿರದ ಹೊರತು ಬಾಡಿಗೆ ಒಪ್ಪಂದದ ಅವದಿಯಲ್ಲಿ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ
ಕರ್ನಾಟಕವೇ ಮೊದಲು
ಮಾಡೆಲ್ ಟೆನೆನ್ಸಿ ಕಾಯ್ದೆಯನ್ನು ಜೂನ್ 2ರಂದು ಮೋದಿ ಸರ್ಕಾರ ಅನುಮೋದಿಸಿತು. ಈಗ ಅದನ್ನು ಅಳವಡಿಸಿಕೊಳ್ಳುವುದು ರಾಜ್ಯಗಳ ಜವಾಬ್ದಾರಿ. ಕರ್ನಾಟಕದ ಕಂದಾಯ ಸಚಿವ ಆರ್. ಅಶೋಕ್ ಅವರ ಪ್ರಕಾರ ಕರ್ನಾಟಕ ಇದನ್ನು ಅಳವಡಿಸಿಕೊಳ್ಳುತ್ತಿರುವ ಭಾರತದ ಮೊದಲ ರಾಜ್ಯವಾಗಿದೆ. ” ಇನ್ನೊಂದು ವಾರದಲ್ಲಿ ಕಂದಾಯ ಇಲಾಖೆಯ ಸಭೆಯನ್ನು ನಡೆಸಲಿದ್ದೇವೆ. ವಿಧಾನಸಭೆಯಲ್ಲಿ ಅದನ್ನು ಮಂಡಿಸುವುದಕ್ಕೆ ಮುಂಚೆ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರಸ್ತುತ ಸಾವಿರಾರು ಮನೆಗಳು ಖಾಲಿ ಇದ್ದು, ಇದರಿಂದ ಎಲ್ಲರಿಗೂ ಲಾಭವಾಗುತ್ತದೆ. ಕರ್ನಾಟಕದಲ್ಲಿ ಈ ಕಾನೂನಿನ ಅನುಷ್ಠಾದ ನಿಟ್ಟಿನಲ್ಲಿ ನಾವು ಕಾರ್ಯಮುಖರಾಗಿದ್ದೇವೆ,” ಎಂದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Model Tenancy Act-new law – change –owner- Terms.