ಬೆಂಗಳೂರು:ಜೂ-1: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೆ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕಚ್ಚಾಡಿಕೊಂಡು ಸರ್ಕಾರ ಪತನವಾಗಿ ತನ್ನ ದಾರಿ ಸುಗಮವಾಗಲಿದೆ ಎಂಬ ಬಿಜೆಪಿ ನಿರೀಕ್ಷೆಗೆ ‘ಪ್ರಬಲ ಮೋದಿ ಅಲೆ’ಯೇ ಅಡ್ಡಿಯಾಗಿದೆಯೇ?
ಒಂದು ಪಕ್ಷದಲ್ಲಿ ಅಭದ್ರತೆ ಸೃಷ್ಟಿಸಿ ಸರ್ಕಾರ ಅಲುಗಾಡಿಸಬೇಕಿದ್ದ ಲೋಕಸಭಾ ಚುನಾವಣೆ, ಮೈತ್ರಿ ಸರ್ಕಾರದ ಎರಡೂ ಪಕ್ಷಗಳಿಗೆ ತೀವ್ರ ಹೊಡೆತ ನೀಡಿದ್ದರಿಂದ ಇಬ್ಬರೂ ಸಮಾನ ದುಃಖಿಗಳಾಗಿದ್ದಾರೆ. ಈ ಕಾರಣಕ್ಕೆ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಹೊರಿಸುವ ಹೊಸ ಸಂಚಲನ ಆರಂಭವಾಗದೆ ಇರಲು ಮೋದಿ ಅಲೆಯೇ ಕಾರಣ ಎನ್ನುವುದು ಬಿಜೆಪಿ ಕೆಲ ನಾಯಕರ ಅಭಿಪ್ರಾಯ.
ನಿರೀಕ್ಷಿಸಿದ್ದು ಆಗಲಿಲ್ಲ: ದೇಶದಲ್ಲಿ ಮೋದಿ ಅಲೆಯನ್ನು ಬಗ್ಗುಬಡಿಯಲು ಮಹಾಘಟಬಂಧನ ಆರಂಭಿಸುವ ಕಾಂಗ್ರೆಸ್ ಕನಸಿಗೆ ಕರ್ನಾಟಕವೇ ಬುನಾದಿಯಾಗಿತ್ತು. ಕರ್ನಾಟಕದಲ್ಲಿ ಸರ್ಕಾರ ನಡೆಸುವ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸಾಧನೆಯನ್ನು ಆಧಾರವಾಗಿಸಿಕೊಂಡೇ ಬಿಜೆಪಿಯೇತರ ಸರ್ಕಾರ ರಚಿಸುವ ಉದ್ದೇಶ ಇತ್ತು. ಬಿಜೆಪಿಯಲ್ಲಿ ಇನ್ನೊಂದು ಲೆಕ್ಕಾಚಾರವಿತ್ತು. 2014ಕ್ಕಿಂತ ಕನಿಷ್ಠ ಒಂದು ಹೆಚ್ಚಿನ ಸಂಸದರು ಜಯಿಸಿದರೂ ಮೈತ್ರಿ ಮೂಲ ಉದ್ದೇಶವೇ ವಿಫಲವಾಗಿ ಸರ್ಕಾರ ಬಿದ್ದುಹೋಗುತ್ತದೆ ಎಂದು ಬಿಜೆಪಿಯ ಎಲ್ಲ ನಾಯಕರೂ ಭಾವಿಸಿದ್ದರು.
ಆದರೆ, ಚುನಾವಣೆ ವೇಳೆ ಮೈತ್ರಿ ಪಕ್ಷಗಳ ನಾಯಕರ ನಡುವೆ ಪರಸ್ಪರ ನಡೆದಷ್ಟು ತೀವ್ರ ವಾಗ್ದಾಳಿ ಚುನಾವಣೆ ಫಲಿತಾಂಶದ ನಂತರ ಕಂಡುಬಂದಿಲ್ಲ. ನಿರೀಕ್ಷೆ ಮೀರಿ ಸರ್ಕಾರಕ್ಕೆ ಹೊಡೆತ ಬಿದ್ದರೂ ಸರ್ಕಾರ ಉರುಳುವ ಲಕ್ಷಣ ಕಾಣದಿರುವುದು ನಾಯಕರಲ್ಲಿ ಅಚ್ಚರಿ ಮೂಡಿಸಿದೆ. ಅಸಮಾಧಾನಿತರು ಎಂದು ಹೇಳಿಕೊಂಡು ಒಮ್ಮೆ ಬಿಜೆಪಿ ಜತೆಗೆ, ಮತ್ತೊಮ್ಮೆ ಸರ್ಕಾರದ ಜತೆಗೆ ಚೌಕಾಸಿ ಮಾಡುತ್ತಿದ್ದವರೂ ಸ್ತಬ್ಧರಾಗಿದ್ದಾರೆ.
ತೀವ್ರ ಫಲಿತಾಂಶವೇ ಕಾರಣ
ಜೆಡಿಎಸ್ನ 3-4 ಸಂಸದರು ಆಯ್ಕೆಯಾಗಿ ಕಾಂಗ್ರೆಸ್ನ ಪ್ರಮುಖರು ನೆಲಕಚ್ಚಿದ್ದರೆ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೇಳುತ್ತಿತ್ತು. ಇನ್ನು ಕಾಂಗ್ರೆಸ್ನ ಪ್ರಮುಖರು 6-7 ಕ್ಷೇತ್ರದಲ್ಲಿ ಗೆದ್ದು ಜೆಡಿಎಸ್ ಈಗಿನಂತೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿದ್ದರೂ, ಕಾಂಗ್ರೆಸ್ ಜತೆಗಿನ ಸಖ್ಯ ವಿನಾಶಕಾರಿ ಎಂದು ಜೆಡಿಎಸ್ನವರು ಕ್ಯಾತೆ ತೆಗೆಯುತ್ತಿದ್ದರು. ಆದರೆ ಬಿಜೆಪಿ ಪ್ರಯತ್ನಕ್ಕೆ ಎರಡು ಪಟ್ಟು ತೀವ್ರವಾಗಿ ರಾಜ್ಯದಲ್ಲಿ ಮೊದಿ ಅಲೆ ಬೀಸಿದೆ. ಚಿಂಚೋಳಿ ಉಪಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಸರ್ಕಾರ ಇದ್ದರಷ್ಟೇ ನಮ್ಮ ಅಸ್ತಿತ್ವ ಎಂಬುದು ಕಾಂಗ್ರೆಸ್-ಜೆಡಿಎಸ್ಗೆ ಅರಿವಾಗಿದ್ದು, ಮೈತ್ರಿ ಸರ್ಕಾರದಲ್ಲಿ ಯಾವುದೇ ಅಸ್ಥಿರತೆಯ ಚಟುವಟಿಕೆ ತೀವ್ರವಾಗುತ್ತಿಲ್ಲ. ಹೀಗಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಜೂ.5ಕ್ಕೆ ಎಲ್ಲ ಶಾಸಕರು, ಸಂಸದರ ಸಭೆ ಮತ್ತು ರಾಜ್ಯ ಪ್ರಮುಖರ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ವೇಳೆಗೆ ಮೈತ್ರಿಯಲ್ಲಿ ಚಟುವಟಿಕೆ ಗರಿಗೆದರುವ ನಿರೀಕ್ಷೆಗಳಿವೆ ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸಂಪುಟ ಬಿಕ್ಕಟ್ಟಿಗಿಂದು ಸೂತ್ರ
ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಂಪುಟ ಪುನಾರಚನೆಗೆ ತೀರ್ವನಿಸಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು, ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದನ್ನು ಶನಿವಾರ ತೀರ್ವನಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ಸೇರಿ ಬಿಕ್ಕಟ್ಟು ಪರಿಹಾರ ಸೂತ್ರ ಸಿದ್ಧಪಡಿಸಲಿದ್ದಾರೆ.
ಸಿಎಂ ಕುಮಾರಸ್ವಾಮಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಶುಕ್ರವಾರ ದೆಹಲಿಯಲ್ಲಿ ಸಭೆ ನಡೆಸಿದ್ದು, ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಗಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಬಿಜೆಪಿಯ ಮುಂದಿನ ಹೆಜ್ಜೆಗಳು, ಅದಕ್ಕೆ ಪ್ರತಿಯಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಅತೃಪ್ತರನ್ನು ಸಮಾಧಾನಿಸುವ ಬಗೆ ಸೇರಿ ವಿವಿಧ ವಿಚಾರಗಳ ಕುರಿತು ಈ ಇಬ್ಬರು ನಾಯಕರು ವಿಚಾರ ವಿನಿಮಯ ಮಾಡಿದರೆಂದು ತಿಳಿದುಬಂದಿದೆ.
ಕಾಂಗ್ರೆಸ್ ಈಗಾಗಲೇ ಶಾಸಕರು, ಸಚಿವರು, ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಎಲ್ಲರಿಗೂ ತಿಳಿಸಿಕೊಡಲಾಗಿದೆ. ಯಾವುದೇ ಆತಂಕ ಬೇಡ. ಸಿದ್ದರಾಮಯ್ಯ ಅವರ ಅಭಿಪ್ರಾಯದಂತೆ ಮುಂದುವರಿಯಿರಿ ಎಂದು ವೇಣುಗೋಪಾಲ್ ಸಿಎಂಗೆ ಅಭಯ ನೀಡಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಶನಿವಾರ ಸಂಜೆ ಅಥವಾ ಭಾನುವಾರ ಉಭಯ ಪಕ್ಷದ ನಾಯಕರ ಸಭೆ ನಡೆಯುವ ಸಾಧ್ಯತೆ ಇದ್ದು, ಸಂಪುಟದಿಂದ ಯಾರನ್ನು ಕೈಬಿಡಬೇಕು, ಕಾಂಗ್ರೆಸ್ನ ಯಾವೆಲ್ಲ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಸರ್ಕಾರ ಉಳಿಸಬಹುದು ಎಂದು ತೀರ್ವನಿಸಲಾಗಲಿದೆ. ಗುರುವಾರ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದೆಹಲಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಮೈತ್ರಿ ಸರ್ಕಾರದ ಬಗ್ಗೆ ಚರ್ಚೆ ನಡೆಸಿದ್ದರು. ಸರ್ಕಾರ ಉಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ರಾಹುಲ್ ಇದೇ ವೇಳೆ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ, ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ದೂರವಾಣಿ ಮುಖೇನ ಮಾಹಿತಿ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಲ್ಲ
ಬೆಂಗಳೂರು: ಮೂರ್ನಾಲ್ಕು ಶಾಸಕರನ್ನು ಮುಂದೆ ಬಿಟ್ಟು ಮಾಜಿ ಸಿಎಂ ಸಿದ್ದರಾಮಯ್ಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದು ಅರಿವಿಗೆ ಬಂದಿದ್ದು, ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಕಾರ್ಯ ನಡೆಸದಿರಲು ಕೇಂದ್ರ ವರಿಷ್ಠರು ತಿಳಿಸಿರುವು ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ 3-4 ಶಾಸಕರನ್ನು ಮುಂದೆ ಬಿಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ನಡೆಸಬೇಡಿ ಎಂದು ಕೇಂದ್ರದ ವರಿಷ್ಠರು ತಿಳಿಸಿದ್ದಾರೆ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡುವುದಿಲ್ಲ. ಜೂ.5ಕ್ಕೆ ಬೆಂಗಳೂರಿನಲ್ಲಿ ಶಾಸಕರು ಹಾಗೂ ಸಂಸದರ ಸಭೆ ಕರೆಯಲಾಗಿದ್ದು, ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಮತ್ತು ವೈಫಲ್ಯದ ವಿರುದ್ಧ ಹೋರಾಟ ರೂಪಿಸುತ್ತೇವೆಂದು ಅವರ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರತಿಪಕ್ಷವಾಗಿ ನಮ್ಮ ಕಾರ್ಯ ಮಾಡುತ್ತೇವೆ. ಅಧಿಕಾರಕ್ಕೆ ನಾವು ಹಾತೊರೆಯುವುದಿಲ್ಲ. ನಮಗೆ ಅದರ ಅಗತ್ಯವಿಲ್ಲ. ವಿಪಕ್ಷದಲ್ಲಿ ಕುಳಿತು ಕೆಲಸ ಮಾಡಲು ನಮಗೆ ಶಕ್ತಿ ಇದೆ. ಮಧ್ಯಂತರ ಚುನಾವಣೆ ಬಗ್ಗೆ ಯಾವುದೇ ಊಹೆ ಮಾಡಿ ನಾನು ಮಾತಾಡುವುದಿಲ್ಲ ಎಂದರು. ಪ್ರಧಾನಿ ಮೋದಿ ಕ್ಯಾಬಿನೆಟ್ ಸಚಿವರಿಗೆ ಉತ್ತಮ ಇಲಾಖೆಗಳನ್ನು ಕೊಟ್ಟಿದ್ದಾರೆ. ನಮಗೆ ಈ ಬಗ್ಗೆ ಬಹಳ ಸಂತೋಷ ಇದೆ. ಮುಂದೆ ಇನ್ನೂ 2 ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದರು.
ಕೃಪೆ:ವಿಜಯವಾಣಿ