ಮೈಸೂರು,ಡಿಸೆಂಬರ್,14,2020(www.justkannada.in): ಪರಿಶುದ್ಧವಾದ ನೀರಿನಿಂದ ತುಂಬಿ ತುಳುಕುತ್ತಿರುವ ಕೆರೆಗಳು ಒಂದು ಊರಿನ , ಒಂದು ಹಳ್ಳಿಯ, ಒಂದು ನಗರದ ಸಮೃದ್ಧತೆಯ ಸಂಕೇತ . ಅಂತಹ ಕೆರೆಗಳು ಬತ್ತುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಒಂದು ಕಾಲದಲ್ಲಿ ಮೈಸೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಸಾವಿರಾರು ಕೆರೆಗಳು ಪರಿಶುದ್ಧವಾದ ನೀರಿನಿಂದ ತುಂಬಿ ತುಳುಕುತ್ತಿದ್ದವು. ಆದರೆ ಮಾನವನ ದುರಾಸೆಗೆ ಹಲವು ಕೆರೆಗಳು ಬಲಿಯಾದವು ಇನ್ನೂ ಹಲವು ಕೆರೆಗಳು ಕೊಚ್ಚೆ ನೀರಿನ ಕೆರೆಗಳಾಗಿ ಪರಿವರ್ತನೆ ಆಗಿದೆ.
ಸಾಮಾನ್ಯವಾಗಿ ನಾವು ಪ್ರಕೃತಿಯಲ್ಲಿ ನಡೆಯುವ ಏರಿಳಿತಗಳಿಗೆ ಪ್ರಕೃತಿಯನ್ನು ಜರಿಯುತ್ತೇವೆ . ಆದರೆ ನಿಜವಾದ ಅರ್ಥದಲ್ಲಿ ಈ ತೊಂದರೆಗಳಿಗೆ ಮಾನವನೇ ಕಾರಣ. ಒಂದು ಊರಿಗೆ ಒಂದು ಪರಿಶುದ್ಧವಾದ ಕೆರೆ ಇದ್ದರೆ ಬಹುಶಹ ಆ ಊರಿಗೆ ಯಾವುದೇ ರೀತಿಯ ಬರ ಬರುವ ಸಂದರ್ಭ ಇರುವುದಿಲ್ಲ. ಮೈಸೂರಿನಂತಹ ನಗರದಲ್ಲಿ ಈ ಹಿಂದೆ ಹತ್ತು ಹಲವು ವಿಸ್ತಾರವಾದ ಕೆರೆಗಳು ಇದ್ದವು. ಆದರೆ ಇಂದು ಕೇವಲ ಬೆರಳೆಣಿಕೆಯಷ್ಟು ಇದ್ದು ಅವುಗಳ ಸ್ಥಿತಿಯೂ ಕೂಡ ಅತ್ಯಂತ ಶೋಚನೀಯವಾಗಿದೆ.
ಲಿಂಗಾಂಬುದಿ ಪಾಳ್ಯದ ಹತ್ತಿರ ಇರುವ ಲಿಂಗಾಂಬುಧಿ ಕೆರೆಯು ಮೈಸೂರಿನ ಅತ್ಯಂತ ವಿಸ್ತಾರವಾದ ಕೆರೆಗಳಲ್ಲಿ ಒಂದಾಗಿದೆ. ಎಲ್ಲರ ನಿರ್ಲಕ್ಷದಿಂದಾಗಿ ಈ ಕೆರೆಯು ಕಳೆದ ವರ್ಷ ಮಳೆಗಾಲದ ನೀರನ್ನು ಹಿಡಿದು ಇಡಲಾಗದೇ ಸಂಪೂರ್ಣವಾಗಿ ಬತ್ತಿ ಹೋಗಿದ್ದನ್ನು ನಾವು ತಿಳಿದುಕೊಂಡಿದ್ದೇವೆ. ಆದರೆ ಈ ವರ್ಷ ಮಳೆ ಚೆನ್ನಾಗಿ ಆಗಿರುವುದರಿಂದ ಈ ಕೆರೆಯಲ್ಲಿ ನೀರು ತುಂಬಿ ಮನಮೋಹಕವಾಗಿದೆ. ಆದರೆ ಈ ಕೆರೆಗೆ ಸೇರುವ ರಾಜ ಕಾಲುವೆಗಳಲ್ಲಿ ಕೊಚ್ಚೆಯ ನೀರು ಸೇರಿ ಅದು ಕೂಡ ಒಂದು ದೊಡ್ಡ ಕೊಚ್ಚೆಯಾಗಿ ಪರಿವರ್ತನೆಯಾಗುತ್ತಿರುವುದು ಅತ್ಯಂತ ವಿಷಾದಕರ ವಿಷಯವಾಗಿದೆ. ಯಾರೊಬ್ಬರೂ ಈ ವಿಷಯದಲ್ಲಿ ಆಸಕ್ತಿಯನ್ನು ವಹಿಸುತ್ತಿಲ್ಲ. ದಟ್ಟಗಳ್ಳಿಯಿಂದ ಹರಿದು ಹೋಗುವ ರಾಜಕಾಲುವೆಯಲ್ಲಿ ಕಲುಷಿತ ನೀರು ತುಂಬಿ ಹರಿಯುತ್ತಿದ್ದು ಅದು ಲಿಂಗಾಂಬುಧಿ ಕೆರೆಗೆ ಸೇರಿದ ಅರಣ್ಯಪ್ರದೇಶದಲ್ಲಿ ಸಂಗ್ರಹಣೆ ಆಗುತ್ತಿದೆ. ಈ ರೀತಿ ಸಂಗ್ರಹಣೆಯಾದ ಕೊಚ್ಚೆ ನೀರು ಸೊಳ್ಳೆಗಳ ವಂಶಾಭಿವೃದ್ಧಿಗೆ ಪ್ರಶಸ್ತ ಸ್ಥಳವಾಗಿದೆ. ಮಳೆ ಜೋರಾಗಿ ಬಂದಾಗ ಇಲ್ಲಿ ಸಂಗ್ರಹವಾದ ನೀರು ಲಿಂಗಾಂಬುಧಿ ಕೆರೆ ಸೇರಿ , ಕೆರೆಯನ್ನು ಸಂಪೂರ್ಣವಾಗಿ ಕೆಡಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.ವಾಸನೆಯಿಂದಾಗಿ ದಿನನಿತ್ಯ ಬದುಕುವುದು ಕಷ್ಟ ಆಗಿದೆ. ಇದು ಲಿಂಗಾಂಬುದಿ ಕೆರೆಯ ಕಥೆ ಮಾತ್ರ ಅಲ್ಲ. ಇದೇ ರೀತಿ ನಮ್ಮ ರಾಜ್ಯದ ಹಲವು ಕೆರೆಗಳು ಬತ್ತಿ ಬರಡಾಗಿ ಕೊಚ್ಚೆಯ ಕೆರೆಗಳಾಗಿ ಪರಿವರ್ತನೆಯಾಗುತ್ತಿರುವುದು ನಿಜವಾಗಿಯೂ ವಿಷಾದಕರ ವಿಷಯವಾಗಿದೆ.
ಡಾ. ನಾರಾಯಣ ಹೆಗಡೆ, ಮೈಸೂರು.
೯೭೪೧೦೦೦೬೬೧.
Key words: money- neglect-mysore- lingabuddi lake-responsible -this.