ಬೆಂಗಳೂರು:ಜೂ-29: ಈ ಸಲ ಮುಂಗಾರು ಕೈಕೊಟ್ಟಿದ್ದರಿಂದ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರಗಳಲ್ಲಿ ಮಳೆ ತೀವ್ರ ಕೊರತೆಯಾಗಿದ್ದು, ಈ ಜಿಲ್ಲೆಗೆಳ ರೈತರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ರಾಜಧಾನಿಗೆ ಪ್ರಮುಖ ನೀರಿನ ಮೂಲವಾಗಿರುವ ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿರುವುದರಿಂದ ಬೆಂಗಳೂರಿಗೂ ಕುಡಿಯುವ ನೀರಿನ ಕೊರತೆ ಆತಂಕ ಎದುರಾಗಿದೆ.
ಮೈಸೂರು ಜಿಲ್ಲೆಯಲ್ಲಿ ಈವರೆಗೆ ಶೇ.10 ಮಳೆ ಕೊರತೆಯಾಗಿದೆ. ವಾಡಿಕೆಯಂತೆ ಜೂ.19ರವರೆಗೆ 261 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 234 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಈ ಹೊತ್ತಿಗೆ 433 ಮಿ.ಮೀ. ಮಳೆಯಾಗಿತ್ತು. ಮಳೆ ಅಭಾವದಿಂದ ಶೇ.50 ಕೂಡ ಬಿತ್ತನೆಯಾಗಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಕಬಿನಿ ಜಲಾಶಯದಲ್ಲಿ ಪ್ರಸ್ತುತ 2257.48 ಅಡಿ (6.42 ಟಿಎಂಸಿ) ನೀರಿದ್ದು, ಒಳಹರಿವು 1083, ಹೊರ ಹರಿವು 600 ಕ್ಯೂಸೆಕ್ ಇದೆ. ಕಳೆದ ವರ್ಷ ಇಲ್ಲಿ 2282.35 ಅಡಿ (18.55 ಟಿಎಂಸಿ) ನೀರಿತ್ತು. ಒಳಹರಿವು 10591, ಹೊರಹರಿವು 6167 ಕ್ಯೂಸೆಕ್ ಇತ್ತು.
ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ ಭರ್ಜರಿ ಮಳೆಯಾದ್ದರಿಂದ ಕೆಆರ್ಎಸ್ನಲ್ಲಿ ಜೂನ್ನಲ್ಲಿ 105.63 ಅಡಿ ನೀರು ಸಂಗ್ರಹವಾಗಿತ್ತು. ಒಳ ಹರಿವು 3995, ಹೊರ ಹರಿವು 3470 ಕ್ಯೂಸೆಕ್ ಇದ್ದು, ಜೂನ್ ಅಂತ್ಯಕ್ಕೆ ಶೇ.9.1ರಷ್ಟು ಬಿತ್ತನೆ ಪೂರ್ಣಗೊಂಡಿತ್ತು. ಆದರೆ, ಈ ವರ್ಷ ಮುಂಗಾರು ಬಾರದ್ದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಕಬ್ಬು ಬೆಳೆ ಒಣಗುತ್ತಿದೆ. ಕೆಆರ್ಎಸ್ನಲ್ಲಿ ಪ್ರಸ್ತುತ 79.77 ಅಡಿ ನೀರಿದ್ದು, ಒಳ ಹರಿವು 655, ಹೊರ ಹರಿವು 324 ಕ್ಯೂಸೆಕ್ ಇದೆ. ಈವರೆಗೆ ಶೇ. 6.8 ಬಿತ್ತನೆ ಆಗಿದೆ. ಮುಂಗಾರು ಮಳೆ ಆಗದಿದ್ದರೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ.
ಕೊಡಗು ಜಿಲ್ಲೆಯಲ್ಲಿ ಮುಂಗಾರು ಕ್ಷೀಣಿಸಿದ್ದು, ಜನವರಿಯಿಂದ ಇಲ್ಲಿಯವರೆಗೆ 369.15 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1312.24 ಮಿ.ಮೀ. ಮಳೆಯಾಗಿತ್ತು. ಹಾರಂಗಿ ಜಲಾಶಯದಲ್ಲಿ ಶುಕ್ರವಾರ 2807.49 ಅಡಿ ನೀರಿದ್ದು, ಕಳೆದ ವರ್ಷ ಇದೇ ವೇಳೆಗೆ 2842.70 ಅಡಿ ನೀರಿತ್ತು. ಮಳೆಯ ಕೊರತೆಯಿಂದ ಕೃಷಿಗೆ ಹಿನ್ನಡೆ, ನೀರಿಗೆ ಪರದಾಟ, ಫಸಲು ಕೈ ಕೊಡೋ ಭೀತಿ, ಡ್ಯಾಂನಲ್ಲಿ ನೀರು ಕುಸಿತ ಉಂಟಾಗಿದೆ. ಜಿಲ್ಲೆಯ ಪ್ರಮುಖ ಜಲಪಾತಗಳು ನೀರಿಲ್ಲದೆ ಸೊರಗಿರುವುದರಿಂದ ಪ್ರವಾಸಿಗರು ಬಾರದ ಪರಿಸ್ಥಿತಿ ನಿರ್ವಣವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇಲ್ಲಿತನಕ ಶೇ.31 ಮಳೆ ಕೊರತೆಯಾಗಿ ಬಿತ್ತನೆಗೂ ಹಿನ್ನಡೆಯಾಗಿದೆ. ಮಾರ್ಚ್ನಿಂದ ಜೂ.21ರ ತನಕ 272.2 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಕೇವಲ 241 ಮಿ.ಮೀ. ಮಳೆ ಆಗಿದೆ. ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಸರಿಯಾಗಿ ಮಳೆಯಾಗದ ಕಾರಣ 42,210 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ 25 ದಿನಗಳಲ್ಲಿ ಮಳೆಯಾಗದ ಕಾರಣ ಜೋಳ, ಸೂರ್ಯಕಾಂತಿ, ಹತ್ತಿ, ಅಲಸಂದೆ, ಹೆಸರು, ಉದ್ದು, ಮುಸುಕಿನ ಜೋಳ, ನೆಲಗಡಲೆ ಫಸಲಿನ ಬೆಳವಣಿಗೆ ಕುಂಠಿತಗೊಂಡಿದೆ. ಇನ್ನು 2 ತಿಂಗಳು ಮಳೆಯಾಗದಿದ್ದರೆ ಹನೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ. ಇನ್ನೊಂದು ತಿಂಗಳು ಮಳೆಯಾಗದಿದ್ದರೆ ಮೇವಿನ ಸಮಸ್ಯೆ ಉಂಟಾಗಲಿದೆ.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಸಂಪೂರ್ಣ ಬರಿದಾಗಿದ್ದು, ಮಳೆರಾಯನ ಮುನಿಸು ಮುಂದುವರಿದರೆ ಹದಿನೈದು ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಆಗಲಿದೆ. ಕಳೆದ ವರ್ಷ ಶೇ.96 ಅಧಿಕ ಮಳೆಯಾದರೆ ಈ ಬಾರಿ ಶೇ. 30 ಕೊರತೆ ಆಗಿದೆ. ಜೋಳ, ರಾಗಿ, ಆಲೂಗಡ್ಡೆ, ಇತರ ಧಾನ್ಯಗಳನ್ನು ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ.
ದುರ್ಬಲವಾದ ಮುಂಗಾರು
ರಾಜ್ಯದ ಕರಾವಳಿ-ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಜೂ. 30ರ ನಂತರ ಮಳೆಯ ಸ್ಪಷ್ಟ ಚಿತ್ರಣ ಕಂಡು ಬರಲಿದೆ. ವಾಯುಭಾರ ಕುಸಿತ ಪೂರ್ಣಪ್ರಮಾಣದಲ್ಲಾಗಿ ಚಂಡಮಾರುತ ಸೃಷ್ಟಿಯಾದರೆ ಮಳೆ ಬರಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಉತ್ತಮ ಮಳೆ
ಉತ್ತರ ಕನ್ನಡ ಜಿಲ್ಲಾದ್ಯಂತ ಶುಕ್ರವಾರ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಸಂಚಾರ ವ್ಯತ್ಯಯವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಮುಂಗಾರು ಬಿರುಸುಗೊಂಡಿಲ್ಲ. ಶುಕ್ರವಾರ ಸಂಜೆ ಹೊಸನಗರ ತಾಲೂಕಿನ ಕೆಲವೆಡೆ ಮಾತ್ರ ಅರ್ಧ ಗಂಟೆ ಮಳೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೋಡ-ಬಿಸಿಲಿನ ಆಟ ಮುಂದುವರಿದಿದ್ದು ಮೂಡಿಗೆರೆಯ ಕಳಸ ಭಾಗದಲ್ಲಿ ತುಂತುರು ಮಳೆಯಾಗಿದೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ.
ಮೋಡ ಬಿತ್ತನೆ ಮೈಸೂರಿಗೆ ಶಿಫ್ಟ್
ಜುಲೈ 2ನೇ ವಾರದಲ್ಲಿ ಬೆಂಗಳೂರು-ಹುಬ್ಬಳ್ಳಿ ಕೇಂದ್ರವಾಗಿಟ್ಟುಕೊಂಡು ಏಕಕಾಲಕ್ಕೆ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿತ್ತು. ಆದರೀಗ ಬೆಂಗಳೂರು ಬದಲು ಮೈಸೂರಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ವಿಮಾನ ಸಂಚಾರ ಅಧಿಕವಿರುವುದರಿಂದ ಮೋಡ ಬಿತ್ತನೆ ವೇಳೆ ನಮ್ಮ ವಿಮಾನ ಹಾರಾಟಕ್ಕೆ ಅನುಮತಿ ಸಿಗದಿರಬಹುದು. ಹೀಗಾಗಿ ಬೆಂಗಳೂರು ಬದಲು ಮೈಸೂರನ್ನು ಆರಿಸಿಕೊಳ್ಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಮುಂಬೈನಲ್ಲಿ ವರುಣಾರ್ಭಟ
ಮುಂಬೈ: ಭಾರಿ ಮಳೆ ಕಾರಣ ಶುಕ್ರವಾರ ಮುಂಬೈ ಅಕ್ಷರಶಃ ಸ್ತಬ್ಧವಾಯಿತು. ನಗರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಣವಾಗಿ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳುವವರು ಪರದಾಡಬೇಕಾಯಿತು. ರೈಲು-ವಿಮಾನ ಸಂಚಾರಕ್ಕೂ ಸಮಸ್ಯೆ ಆಯಿತಾದರೂ ನಂತರ ಸಹಜ ಸ್ಥಿತಿಗೆ ಮರಳಿದೆ. ನಾಸಿಕ್ ಜಿಲ್ಲೆಯಲ್ಲಿ ಮಳೆಯಿಂದಾದ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಾಲ್ಗರ್ ಜಿಲ್ಲೆಯ ಸಂತಕೋರ್ನಲ್ಲಿ ಗುರುವಾರ ಸಿಡಿಲು ಹೊಡೆದು 8 ವರ್ಷದ ಬಾಲಕ ಮೃತನಾಗಿದ್ದಾನೆ. ಮುಂಬೈನಲ್ಲಿ ಮಳೆ ಮುಂದಿನ 48 ಗಂಟೆ ಕಾಲ ಮುಂದುವರಿಯಲಿದ್ದು,100 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಮುನ್ಸೂಚನೆ ನೀಡಿದೆ.
ಕೃಪೆ:ವಿಜಯವಾಣಿ