ಬೆಂಗಳೂರು,ನವೆಂಬರ್, 24,2020(www.justkannada.in): ‘ಕೋಮುವಾದ ಕೊರೋನಾಗಿಂತಲೂ ಅಪಾಯಕಾರಿಯಾದ ವೈರಸ್’ ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
‘ಅವಧಿ’ ಹಮ್ಮಿಕೊಂಡಿದ್ದ ಎಸ್ ಜಿ ಸಿದ್ದರಾಮಯ್ಯನವರ ‘ಬಿಜ್ಜಳ ನ್ಯಾಯ’ ಹಾಗೂ ‘ದಕ್ಕದ ದಾರಿಯಲ್ಲಿ’ ಕವನ ಸಂಕಲನಗಳ ಆನ್ಲೈನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ದೇಶಕ್ಕೆ ಶತಮಾನಗಳಿಂದ ಅಂಟಿಕೊಂಡುಬಂದಿರುವ ಕೋಮುವಾದವೇ ಅತ್ಯಂತ ವಿಷಕಾರಿಯಾದ ರೋಗ. ಅದನ್ನು ದಾಟುವುದೇ ಇಂದಿನ ಮುಖ್ಯ ಸವಾಲು. ಅದರಿಂದ ಮುಕ್ತವಾಗದ ಹೊರತು ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಅವರು ವಿಷಾದಿಸಿದರು. ಯಾರು ಈ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೋ ಅವರೇ ಈ ಕೋಮುವಾದದ ಮುನ್ನಡೆಗೆ ಕಾಲಾಳುಗಳಾಗಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ ಎಂದು ಎಸ್.ಜಿ ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಖ್ಯಾತ ವಿಮರ್ಶಕರಾದ ಎಂ ಎಸ್ ಆಶಾದೇವಿ ಅವರು ಮಾತನಾಡಿ, ಎಸ ಜಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಹಾಗೂ ಕಾವ್ಯ ಎರಡೂ ನಿಷ್ಠುರ ಗುಣವನ್ನು ಹೊಂದಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ಉಳಿಸಿಕೊಳ್ಳಬೇಕಾಗಿರುವ ಈ ಕಾಲದಲ್ಲಿ ಸಿದ್ಧರಾಮಯ್ಯನವರ ಕಾವ್ಯದ ತಾಯ್ತನ ಕಾಡುತ್ತದೆ ಎಂದರು.
ವಿಮರ್ಶಕ ರಾಮಲಿಂಗಪ್ಪ ಟಿ ಬೇಗೂರು ಅವರು ಮಾತನಾಡಿ, ಎಸ್ ಜಿ ಸಿದ್ದರಾಮಯ್ಯ ಅವರ ಜನಪರ, ಜೀವಪರ ದೃಷ್ಟಿಕೋನ ಅವರ ಬರವಣಿಗೆಯ ಮುಖ್ಯ ಕೇಂದ್ರವಾಗಿದೆ. ಓದುಗನೂ ಕವಿತೆಯನ್ನು ಅನುಭವಿಸುವಂತೆ ಸಿದ್ದರಾಮಯ್ಯ ಅವರು ಬರೆಯುತ್ತಾರೆ ಅವರಿಗೆ ಅಪರಿಮಿತದ ಹಂಬಲ ಮತ್ತು ಓದುಗನಿಗೆ ಅರ್ಥದ ತೊಡಕಾಗಬಾರದು ಎನ್ನುವ ಕಾಳಜಿಯಿದೆ ಎಂದರು.
‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಮಾತನಾಡಿ ‘ಬಿಜ್ಜಳ ನ್ಯಾಯ’ದ ಮೂಲಕ ಸಿದ್ದರಾಮಯ್ಯನವರು ಸುಳ್ಳುಗಳ ಕೋಟೆಯಿಂದ ಆತನ್ನು ಬಿಡಿಸಿಕೊಂಡು ಹೊರತಂದಿದ್ದಾರೆ. ಬಿಜ್ಜಳ ಜನಪರವಾಗಿದ್ದ ಎನ್ನುವುದನ್ನು ಮರೆಸುವ ಕುತಂತ್ರವನ್ನು ಸಿದ್ದರಾಮಯ್ಯನವರ ಕಾವ್ಯ ಬಯಲು ಮಾಡುತ್ತದೆ ಎಂದರು.
Key words: more -dangerous virus – communal- coronavirus- S G Siddaramaiah