ಬೆಂಗಳೂರು, ನವೆಂಬರ್ 20,2020(www.justkannada.in): ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಹೆಚ್ಚು ಸಂಶೋಧನೆ, ಅಧ್ಯಯನಗಳನ್ನು ನಡೆಸಿ ಅದನ್ನು ದಾಖಲಾಗಿಸಬೇಕು. ಈ ಮೂಲಕ ಈ ವೈದ್ಯ ಪದ್ಧತಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೆಎಚ್ ಬಿ ಕಾಲೋನಿಯಲ್ಲಿ ಕರ್ನಾಟಕ ಹೋಮಿಯೋಪತಿ ಮಂಡಳಿಯ ನೂತನ ಆಡಳಿತ ಕಚೇರಿ ‘ಹೋಮಿಯೋ ಭವನ’ವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಕೋವಿಡ್ ಸಮಯದಲ್ಲಿ ಬಹಳ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಗಳಿಗೆ ಹೋಗಿ ಔಷಧಿ ಪಡೆದಿದ್ದಾರೆ. ಈ ರೀತಿ ಜನರು ಹೋಮಿಯೋಪತಿ ಕಡೆ ಆಸಕ್ತಿ ತೋರಿದ್ದಾರೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಅಲೋಪತಿ ಮಾತ್ರವಲ್ಲದೆ, ಯುನಾನಿ, ಆಯುರ್ವೇದ, ಹೋಮಿಯೋಪತಿಗೂ ಬೇಡಿಕೆ ಹೆಚ್ಚಿದೆ. ಇಂತಹ ಸಮಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುತ್ತಿರುವವರು ಹೆಚ್ಚು ಸಂಶೋಧನೆಗಳನ್ನು ನಡೆಸಿ, ಅದನ್ನು ಜನರಿಗೆ ತಿಳಿಸಬೇಕು” ಎಂದರು.
ಹೋಮಿಯೋಪತಿಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ರೋಗ ನಿರೋಧಕ ಶಕ್ತಿ ವೃದ್ಧಿಸಲು ಈ ಪದ್ಧತಿ ಪೂರಕವಾಗಿದೆ. ಆದರೆ ಈ ಪದ್ಧತಿ ಬಹಳ ಸರಳ, ಸಲೀಸಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಜನರಲ್ಲಿ ನಂಬಿಕೆ ಕಡಿಮೆಯಾಗಿದೆ ಎಂದೂ ಹೇಳಲಾಗುತ್ತಿದೆ. ರಾಜ್ಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುವ 15 ಸಾವಿರ ವೈದ್ಯರಿದ್ದಾರೆ. ಎಲ್ಲರೂ ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಿ” ಎಂದು ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ತೆಲಂಗಾಣದಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸೆಗೆ ಹಣ ಪಡೆಯಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಕಳೆದ 9 ತಿಂಗಳಿಂದ ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಸರ್ಕಾರದ ಶಿಫಾರಸು ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದವರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ಉಚಿತ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಸಚಿವ ಸುಧಾಕರ್ ವಿವರಿಸಿದರು.
ಸಾಮಾನ್ಯ ಜನರಿಗೆ ಆರೋಗ್ಯ ಭಾಗ್ಯ ನೀಡಬೇಕು ಎಂಬ ಗುರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಂದಿದ್ದಾರೆ. ಈ ಹೊಸ ಭವನ ಅದಕ್ಕೆ ಪೂರಕವಾಗಿದೆ. ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಅವರು ತಮ್ಮ ಹಣ ಹಾಗೂ ದೇಣಿಗೆ ಬಳಸಿ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
Key words: More research- needs – homeopathy-Health and Medical Education Minister- Dr K Sudhakar